
ಮೈಸೂರು
ಪ್ರತಿಭಟನೆಯ ವೇಳೆ ಕುಸಿದು ಬಿದ್ದ ಶಾಸಕ: ಚೇತರಿಕೆ
ಹಾರಂಗಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಶಾಸಕ ಸಾ.ರಾ.ಮಹೇಶ್ ನೇತೃತ್ವದಲ್ಲಿ ಜೆ.ಡಿ.ಎಸ್ ಕಾರ್ಯಕರ್ತರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನೆಯ ವೇಳೆ ಶನಿವಾರ ಸಾಯಂಕಾಲ ಶಾಸಕ ಸಾ.ರಾ.ಮಹೇಶ್ ಲೋ ಬಿಪಿಯಿಂದ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಘಟನೆ ನಡೆದಿದೆ.
ಕಳೆದ ಮೂರು ದಿನಗಳಿಂದ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಕೆ.ಆರ್.ನಗರದ ಶಾಸಕ ಸಾ.ರಾ.ಮಹೇಶ್ ಶನಿವಾರ ಸಾಯಂಕಾಲದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದರು ಎನ್ನಲಾಗಿದೆ. ಅವರಿಗೆ ಲೋ ಬಿಪಿ ಉಂಟಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದ್ದು, ತಕ್ಷಣ ಅವರನ್ನು ಆ್ಯಂಬೂಲೆನ್ಸ್ ಮೂಲಕ ಅಪೊಲೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿದ್ದು ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಭತ್ತದ ಬೆಳೆಗೆ ಹಾರಂಗಿ ಜಲಾಶಯದಿಂದ ನೀರು ಹರಿಸುವಂತೆ ಆಗ್ರಹಿಸಿ ಕೆ.ಆರ್.ನಗರ, ಪಿರಿಯಾಪಟ್ಟಣ ತಾಲೂಕಿನ ರೈತರ ಪರ ಶಾಸಕರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.