ಕರ್ನಾಟಕಮೈಸೂರು

ಕಾವೇರಿ ಕದನ: ರಾಷ್ಟ್ರೀಯ ಜಲನೀತಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ಕ್ರಿಯಾಸಮಿತಿ ಒತ್ತಾಯ

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು ನಿರ್ದೇಶನ ನೀಡಿದ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಕನ್ನಡಿಗರು ರೊಚ್ಚಿಗೆದ್ದರು. ‘ಕಾವೇರಿ’ದ ವಿವಾದದಿಂದ ಉದ್ವಿಗ್ನಗೊಂಡಿದ್ದ ಜಿಲ್ಲೆಯೀಗ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಅಂಗಡಿ-ಮುಂಗಟ್ಟುಗಳು, ಮಾಲ್‍ಗಳು, ಚಿತ್ರಮಂದಿರಗಳು ತೆರೆದಿವೆ. ಮೈಸೂರು ಜಿಲ್ಲೆಯ 5 ತಾಲೂಕುಗಳಲ್ಲಿ (144ಸೆಕ್ಷನ್) ನಿಷೇಧಾಜ್ಞೆ ಜಾರಿಯಲ್ಲಿದೆ. ಕಾವೇರಿ ಕ್ರಿಯಾ ಸಮಿತಿ ಮಹಾರಾಜ ಕಾಲೇಜ್‍ನಿಂದ ಗಾಂಧಿ ಸ್ಕ್ವೇರ್‍ವರೆಗೆ ರ್ಯಾಲಿ ನಡೆಸಲು ನಿರ್ಧರಿಸಿತ್ತು, ಆದರೆ 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಗಾಂಧಿ ಸ್ಕ್ವೇರ್ ಬಳಿ ಸಾಂಕೇತಿಕ ಧರಣಿ ನಡೆಸಿದರು.

144 ಸೆಕ್ಷನ್ ಮುಂದುವರಿಸಲಾಗಿದ್ದು, ನಾಳೆ ಮಧ್ಯಾಹ್ನ 12 ಗಂಟೆಗೆ ತೆರವುಗೊಳ್ಳಲಿದೆ. ಮತ್ತೆ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾದಲ್ಲಿ ಸೆಕ್ಷನ್ ಮುಂದುವರಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷ ಪ. ಮಲ್ಲೇಶ್, ಸಾಹಿತಿ ಕೆ.ಎಸ್. ಭಗವಾನ್ ಸಾಂಕೇತಿಕ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ನ್ಯಾಯಾಲಯದ ಎದುರು ತಿಥಿ ಚಲನಚಿತ್ರದ ಸೆಂಚುರಿ ಗೌಡ ಖ್ಯಾತಿಯ ಗಡ್ಡಪ್ಪ, ತರ್ಲೆ ವಿಲೇಜ್ ಚಿತ್ರ ತಂಡದೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕುಡಿಯೋದಕ್ಕೂ ನೀರಿಲ್ಲ, ರಾಜ್ಯದ ರೈತರು ಅತ್ಯಂತ ಸಂಕಷ್ಟವನ್ನೆದುರಿಸುತ್ತಿದ್ದಾರೆ. ರೈತರ ಆವಶ್ಯಕತೆಗಳನ್ನು ಮುಂದಿರಿಸಿ ಹೋರಾಟ ಮಾಡಿ ರಾಜ್ಯ ಸರ್ಕಾರ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಮೈಸೂರು-ಬೆಂಗಳೂರು ರಸ್ತೆ ಸಾರಿಗೆ ವ್ಯವಸ್ಥೆಯು ಸೆಪ್ಟೆಂಬರ್ 12 ರಿಂದ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಮಂಡ್ಯ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಮದ್ದೂರು ನಗರದಲ್ಲಿ ಜನರಲ್ಲಿ ಧೈರ್ಯ ತುಂಬಲು ಪೊಲೀಸರು ಪಥ ಸಂಚಲನ ನಡೆಸಿದರು.

ಪ್ರತಿಭಟನೆ, ಬಂದ್‍ಗಳಿಂದ ಮೈಸೂರಿನಲ್ಲಿ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಸಂಚಾರ ವ್ಯವಸ್ಥೆ ಇಲ್ಲದೇ ಯಾವಾಗಲು ಪ್ರವಾಸಿಗರಿಂದ ಗಿಜಿಗುಟ್ಟುತ್ತಿದ್ದ ಹೋಟೆಲ್, ವಸತಿಗೃಹಗಳು ಈಗ ಬಣಗುಟ್ಟುತ್ತಿವೆ. ದಸರಾ ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದ್ದು, ಕಾವೇರಿ ಪ್ರತಿಭಟನೆಯಿಂದ ಹೋಟೆಲ್ ಮತ್ತು ಇತರ ಉದ್ಯಮಗಳಿಗೆ ಹಿನ್ನಡೆಯುಂಟಾಗಲಿದೆ.

ಮಂಡ್ಯದಲ್ಲಿ ಪ್ರತಿಭಟನೆ ಮುಂದುವರಿದಿದೆ. ಮಾಜಿ ಸಂಸದ ಜಿ.ಮಾದೇಗೌಡ ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿ ಎಸ್. ಜಿಯಾತುಲ್ಲಾ ಸೆಪ್ಟೆಂಬರ್ 17ರ ವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮಂಗಳವಾರ ಸಾಯಂಕಾಲ ಶಂಕರ ಮಠದಲ್ಲಿ ಕಾವೇರಿ ಕ್ರಿಯಾ ಸಮಿತಿ ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಸಭೆ ನಡೆಸಿದ್ದವು. ಕಾವಲು ಪಡೆಯ ಮೋಹನ್ ಕುಮಾರ್ ಗೌಡ ಉಪಸ್ಥಿತಿಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು. ಪ.ಮಲ್ಲೇಶ್ ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. ಕಾವೇರಿ ಕ್ರಿಯಾ ಸಮಿತಿಯ ಕಾರ್ಯಕರ್ತರು ಮುಂದಿನ ನಡೆಯ ಕುರಿತು ಚರ್ಚಿಸಿದರು. ಮಹಾರಾಜ ಕಾಲೇಜಿನಿಂದ ಗಾಂಧಿ ಸ್ಕ್ವೇರ್ ತನಕ ಮಹಾರಾಜ-ಯುವರಾಜ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಸೇರಿಸಿ ರ್ಯಾಲಿ ನಡೆಸಲು ನಿರ್ಧರಿಸಲಾಯಿತು. ಪ. ಮಲ್ಲೇಶ್ ಮಾತನಾಡಿ, ಹೋರಾಟವನ್ನು ಕೆಲವೇ ತಾಸುಗಳಿಗೆ ಸೀಮಿತವಾಗಿರಿಸದೇ ರಾಜ್ಯಕ್ಕೆ ಕಾವೇರಿ ವಿವಾದದಲ್ಲಿ ನ್ಯಾಯಸಿಗುವವರೆಗೂ ನಡೆಸಬೇಕೆಂದು ನಿರ್ಧರಿಸಲಾಯಿತು. ಬೆಂಗಳೂರಿನಲ್ಲಿ ಲಾಠಿ ಚಾರ್ಜ್ ವೇಳೆ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಕುಮಾರ್ ಎಂಬವರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸಭೆಯಲ್ಲಿ ರಘುರಾಮ, ರೇವಣ್ಣ, ಎಸ್‍ಬಿಎಂ ಮಂಜು, ರಾಜಕೀಯ ರವಿ, ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿರಿದ್ದರು.

Leave a Reply

comments

Related Articles

error: