
ಮೈಸೂರಿನ ಹಾರ್ಡ್ವಿಕ್ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ದಿ.ಕೆ.ವಿ.ಅರ್ಕನಾಥ್ ಮತ್ತು ದಿ.ಟಿ.ಭೋಜರಾಜನ್ ರವರ ಸ್ಮರಣಾರ್ಥ ಅಖಿಲ ಭಾರತ ಪುರುಷರ ಆಹ್ವಾನಿತ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಲಾಯಿತು.
ಅಖಿಲ ಭಾರತ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ ಮತ್ತು ಸೌತ್ ಸೆಂಟ್ರಲ್ ರೈಲ್ವೆ ಆಟ ನಡೆಸಿದ್ದು ಮಹಾರಾಷ್ಟ್ರ ತಂಡವು 7 ನಿಮಿಷವನ್ನು ಉಳಿಸಿಕೊಂಡು 01 ಅಂಕಗಳಿಂದ ಜಯಗಳಿಸಿದೆ. ಎರಡನೆಯ ಪಂದ್ಯದಲ್ಲಿ ಪಶ್ಚಿಮ ರೈಲ್ವೆ ತಂಡ ಮತ್ತು ಕೇರಳ ತಂಡದೊಂದಿಗಿನ ಆಟದಲ್ಲಿ ಪಶ್ಚಿಮ ರೈಲ್ವೆ ತಂಡವು 8-10ನಿಮಿಷವನ್ನು ಬಾಕಿ ಉಳಿಸಿಕೊಂಡು 01 ಅಂಕದಿಂದ ಜಯ ಸಾಧಿಸಿದೆ. ಮೂರನೇ ಪಂದ್ಯದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ತಂಡಗಳ ನಡುವೆ ನಡೆದ ರೋಚಕ ಪಂದ್ಯದಲ್ಲಿ ಕರ್ನಾಟಕ ತಂಡ 10 ಅಂಕಗಳಿಂದ ಜಯ ಗಳಿಸಿದೆ.
ಸಾಯಂಕಾಲ ನಡೆದ ಪಂದ್ಯದಲ್ಲಿ ಕೊಲ್ಹಾಪುರ ಮತ್ತು ತೆಲಂಗಾಣ ನಡುವೆ ಪಂದ್ಯ ನಡೆದಿದ್ದು, ಕೊಲ್ಹಾಪುರ ತಂಡವು 07 ಅಂಕದಿಂದ ಜಯಗಳಿಸಿದೆ. ಸೌತ್ ಸೆಂಟ್ರಲ್ ರೈಲ್ವೆ ಮತ್ತು ಛತ್ತೀಸ್ ಗರ್ ನಡುವೆ ನಡೆದ ಪಂದ್ಯದಲ್ಲಿ ಛತ್ತೀಸ್ ಗರ್ ತಂಡವು 01ಅಂಕದಿಂದ ಜಯಗಳಿಸಿದೆ. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ನಡುವೆ ನಡೆದ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವು 03ಅಂಕಗಳಿಂದ ಜಯ ಸಾಧಿಸಿದೆ.
ಇನ್ನೂ ಎರಡು ದಿನಗಳ ಕಾಲ ಪಂದ್ಯ ನಡೆಯಲಿದ್ದು, ರೋಚಕ ಆಟಗಳು ನಡೆಯುತ್ತಿವೆ.
ಶಾಸಕ ವಾಸು, ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಹಾಗೂ ವಸತಿ ಸಚಿವ ಎಂ.ಕೃಷ್ಣಪ್ಪ ಅನುಪಸ್ಥಿತಿಯಲ್ಲಿ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಹೆಚ್.ವಾಸು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಖೋ-ಖೋ ಪುರಾತನ ಕಾಲದಿಂದಲೂ ಪ್ರಚಲಿತದಲ್ಲಿದ್ದು, ಇದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿದ್ಯಾಶಾಲೆಯ ಪ್ರಾಂಶುಪಾಲ ಕೀರ್ತಿಕುಮಾರ್, ಹಿರಿಯ ಲೆಕ್ಕ ಪರಿಶೋಧಕ ಟಿ.ಆರ್.ಹರೀಶ್ ಮತ್ತಿತರರು ಉಪಸ್ಥಿತರಿದ್ದರು.