ಕರ್ನಾಟಕಪ್ರಮುಖ ಸುದ್ದಿ

ಮೈತ್ರಿ ಸರ್ಕಾರದ ಪರಿಣಾಮ: ವಿಧಾನಪರಿಷತ್ ಸಭಾಪತಿ ಸ್ಥಾನ ಕಳೆದುಕೊಳ್ಳಲಿದೆ ಬಿಜೆಪಿ

ಬೆಂಗಳೂರು (ಜೂನ್ 14): ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಆಡಳಿತ ಪಕ್ಷಕ್ಕೆ ಸಭಾಪತಿ ಸ್ಥಾನ ಬಿಟ್ಟು ಕೊಡದ ಬಿಜೆಪಿ ಇದೀಗ ಸಮ್ಮಿಶ್ರ ಸರ್ಕಾರ ರಚನೆಯಾದ ಕಾರಣ ಸಭಾಪತಿ ಸ್ಥಾನವನ್ನು ಬಿಟ್ಟುಕೊಡಬೇಕಾಗಿ ಬಂದಿದೆ. ಹೌದು, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಬಲಕ್ಕೆ ಪರಿಷತ್‍ನಲ್ಲೂ ಮಣಿಯಬೇಕಿರುವ ಬಿಜೆಪಿಯು ವಿಧಾನ ಪರಿಷತ್ ಸಭಾಪತಿ ಸ್ಥಾನವನ್ನು ಎಂಟು ವರ್ಷದ ನಂತರ ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಂಖ್ಯೆಗಿಂತಲೂ ಕಡಿಮೆ ಸಂಖ್ಯೆಗೆ ಬಿಜೆಪಿ ಇಳಿದರೂ ಜೆಡಿಎಸ್ ಸಖ್ಯದಿಂದ ಕಾಂಗ್ರೆಸ್ ಪಕ್ಷಕ್ಕೆ ಸಭಾಪತಿ ಸ್ಥಾನ ಸಿಗದಂತೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಈ ಒಡಂಬಡಿಕೆಯಿಂದಾಗಿ ಐದು ವರ್ಷ ಪೂರ್ಣಾವಧಿ ಮುಗಿಸಿದರೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಭಾಪತಿ ಭಾಗ್ಯ ಸಿಕ್ಕಿರಲಿಲ್ಲ. ಈಗ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ.

ಜೆಡಿಎಸ್ ಹಾಗೂ ಕಾಂಗ್ರೆಸ್ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿವೆ. ಹಾಗಾಗಿ ಸಹಜವಾಗಿ ವಿಧಾನ ಪರಿಷತ್‍ನಲ್ಲೂ ಜೆಡಿಎಸ್ ಪಕ್ಷವು ಬಿಜೆಪಿ ಸಖ್ಯ ತೊರೆದು ಕಾಂಗ್ರೆಸ್ ಜೊತೆ ಸೇರಿ ಸಭಾಪತಿ ಸ್ಥಾನ ಪಡೆದುಕೊಳ್ಳಲಿದೆ.

ವಿಧಾನ ಪರಿಷತ್‍ನಲ್ಲಿ ಸದ್ಯ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್ 34, ಬಿಜೆಪಿ 19, ಜೆಡಿಎಸ್ 14, ಪಕ್ಷೇತರ ಇಬ್ಬರು ಸದಸ್ಯರಿದ್ದು, 6 ಸ್ಥಾನ ಖಾಲಿ ಉಳಿದಿವೆ. 75 ಸದಸ್ಯ ಬಲದ ವಿಧಾನ ಪರಿಷತ್ ಸಭಾಪತಿ ಸ್ಥಾನ ಪಡೆಯಲು 38 ಸ್ಥಾನ ಅಗತ್ಯ.

ಈಗ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಇರುವ ಕಾರಣ ಆಡಳಿತ ಪಕ್ಷದ ಬಲ 48 ಆಗಲಿದೆ. ಬಹುಮತಕ್ಕೂ 10 ಸ್ಥಾನ ಹೆಚ್ಚಿದೆ. ಆದರೆ ಪರಿಷತ್ನಲ್ಲಿ 6 ಸ್ಥಾನ ಖಾಲಿ ಇರುವ ಕಾರಣ ಪರಿಷತ್ ಬಲ 69 ಕ್ಕೆ ಕುಸಿದಿದ್ದು, ಬಹುಮತಕ್ಕೆ 35 ಸ್ಥಾನ ಸಾಕು. ಆದರೂ ಪೂರ್ಣ ಪ್ರಮಾಣದ ಬಹುಮತಕ್ಕೂ ಹೆಚ್ಚಿನ ಸ್ಥಾನ ಮೈತ್ರಿಕೂಟಕ್ಕೆ ಲಭ್ಯವಿರುವ ಕಾರಣ ಅನಾಯಾಸವಾಗಿ ಮೈತ್ರಿಕೂಟಕ್ಕೆ ಸಭಾಪತಿ ಸ್ಥಾನ ಖಚಿತವಾಗಿದೆ.

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವೇಳೆ ಸಭಾಪತಿಯಾಗಿ ಆಯ್ಕೆಯಾದ ಶಂಕರಮೂರ್ತಿ ಹೆಚ್ಚು ಕಡಿಮೆ 8 ವರ್ಷ ಹುದ್ದೆ ಅಲಂಕರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಇದೀಗ ತಮ್ಮ ಸ್ಥಾನ ಬಿಟ್ಟುಕೊಡಬೇಕಾಗಿ ಬಂದಿದೆ. (ಎನ್.ಬಿ)

Leave a Reply

comments

Related Articles

error: