ಕರ್ನಾಟಕಪ್ರಮುಖ ಸುದ್ದಿ

ಅನರ್ಹರಿಗೆ ಸಚಿವ ಸ್ಥಾನ ಸಿಕ್ಕಿದೆ! ಜಮೀರ್, ಖಾದರ್ ವಿರುದ್ಧ ಮಾಜಿ ಸಚಿವ ತನ್ವೀರ್ ಸೇಠ್ ಕಿಡಿ

ಬೆಂಗಳೂರು (ಜೂನ್ 14): ಅನರ್ಹರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿರುವ ಮಾಜಿ ಸಚಿವ ತನ್ವೀರ್ ಸೇಠ್ ಅವರು ತಮ್ಮನ್ನು ಕಡೆಗಣಿಸಿ ಜೆಡಿಎಸ್‍ನಿಂದ ಬಂದ ಜಮೀರ್ ಅಹಮದ್ ಖಾನ್‍ಗೆ ಸಚಿವ ಸ್ಥಾನ ನೀಡಿರುವ ಕ್ರಮದ ವಿರುದ್ಧ ಕಿಡಿಕಾರಿದ್ದಾರೆ.

ಇದರಿಂದಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದ ಸಚಿವ ಸಂಪುಟ ರಚನೆ ಬಳಿಕ ಸ್ಫೋಟಗೊಂಡಿದ್ದ, ಸಚಿವ ಸ್ಥಾನ ವಂಚಿತ ಶಾಸಕರ ಆಕ್ರೋಶ, ಕಳೆದ ಮೂರ್ನಾಲ್ಕು ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದು, ಇದೀಗ ಮೈಸೂರು ಭಾಗದಲ್ಲೂ ಭಿನ್ನಮತದ ಸದ್ದು ಕೇಳಿಸಿದೆ.

ಇಂದು ನಡೆಯಲಿರುವ ಸಮ್ಮಿಶ್ರ ಸರ್ಕಾರದ ಮೊದಲ ಸಮನ್ವಯ ಸಮಿತಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದ ಶಾಸಕ ತನ್ವೀರ್ ಸೇಠ್, ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯು.ಟಿ.ಖಾದರ್ ಅಥವಾ ಜಮೀರ್ ಅಹಮದ್ ಖಾನ್‍ಗೆ ನಮ್ಮ ಸಮುದಾಯವನ್ನು ಪ್ರತಿನಿಧಿಸುವ ಸಾಮರ್ಥ್ಯವಿಲ್ಲ. ಅರ್ಹರಲ್ಲದವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದರಲ್ಲದೆ, ಜಮೀರ್ ಅಹಮದ್ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಯತ್ನಿಸಿದ್ದರೆಂದು ಗಂಭೀರ ಆರೋಪ ಮಾಡಿದ್ದಾರೆ.

ಅತ್ತ ಹೈಕಮಾಂಡ್ ಭೇಟಿ ಬಳಿಕ ತಣ್ಣಗಾಗಿದ್ದ ಮಾಜಿ ಸಚಿವ ಎಂ.ಬಿ.ಪಾಟೀಲ್, ಇದೀಗ ನಾಳೆ ಶಾಸಕರ ಸಭೆ ನಡೆಸಲು ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕ ಸುಧಾಕರ್, ಪಕ್ಷದ ಯುವ ನಾಯಕರಿಗೆ ಅವಕಾಶ ನೀಡದಿದ್ದಲ್ಲಿ ಸರ್ಕಾರಕ್ಕೆ ಅಪಾಯ ತಪ್ಪಿದ್ದಲ್ಲ ಎನ್ನುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. (ಎನ್.ಬಿ)

Leave a Reply

comments

Related Articles

error: