ಮೈಸೂರು

ಹೆಚ್ಚುತ್ತಿರುವ ಸುನಿಲ್ ಬೋಸ್ ಕಾರುಬಾರು: ಪ್ರಶ್ನಿಸಿದರೆ ಜೈಲು

ಮೈಸೂರು ಜಿಲ್ಲೆ ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಪುತ್ರ ಸುನಿಲ್ ಬೋಸ್ ಕಾರುಬಾರು ಹೆಚ್ಚುತ್ತಿದ್ದು ಇದನ್ನು ಪ್ರಶ್ನಿಸಿದವರನ್ನು ಶಾಂತಿಭಂಗದ ಹೆಸರಿನಲ್ಲಿ ಜೈಲಿಗೆ  ಅಟ್ಟಲಾಗುತ್ತಿದೆ.

ತಿ.ನರಸೀಪುರ ವ್ಯಾಪ್ತಿಯ ಕುಕ್ಕೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿಪೂಜೆ ನೆರವೇರಿಸಲು ಸಚಿವ ಮಹದೇವಪ್ಪ ಅವರು ಹೋಗಬೇಕಾಗಿತ್ತು. ಆದರೆ ಅವರ ಪುತ್ರ ಸುನಿಲ್ ಬೋಸ್ ತೆರಳಿದ್ದಾಗ ಆ ಗ್ರಾಮದ ಯುವಕರಾದ ಪ್ರವೀಣ್ ಮತ್ತು ಶಿವಮೂರ್ತಿ ಸುನಿಲ್ ಬೋಸ್ ಅವರ ಬಳಿ ತೆರಳಿ ನಮ್ಮೂರಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದನ್ನು ಹೇಳಿಕೊಳ್ಳಲು ಸಚಿವರು ಬರುತ್ತಾರೆಂದು ನಾವೆಲ್ಲಾ ಕಾದಿದ್ದೆವು. ಅವರು ಬರದೆ ನಿಮ್ಮನ್ನು ಕಳುಹಿಸಿದ್ದಾರೆ. ನೀವ್ಯಾಕೆ ಗುದ್ದಲಿಪೂಜೆ ಮಾಡುತ್ತಿದ್ದೀರಿ, ನಿಮ್ಮ ತಂದೆಯವರನ್ನೇ ಕಳುಹಿಸಿ ಅಂತ ಹೇಳಿದ್ದಾರೆ. ಅದಕ್ಕೆ ಕೋಪಗೊಂಡ ಸುನಿಲ್ ಬೋಸ್ ಸ್ಥಳದಲ್ಲಿದ್ದ ಪೊಲೀಸರಿಗೆ ಇಬ್ಬರೂ ಯುವಕರನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಸೂಚಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ. ಸಚಿವರ ಪುತ್ರನ ಆದೇಶವನ್ನು ಪಾಲಿಸಿದ ತಲಕಾಡು ಪೊಲೀಸರು ಇಬ್ಬರೂ ಯುವಕರನ್ನು ಸೆಕ್ಷನ್ 107ರಡಿ ಕೇಸು ಹಾಕಿ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.

ಬಳಿಕ ಅವರಿಬ್ಬರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ತಿ.ನರಸೀಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಸಚಿವ ಮಹದೇವಪ್ಪ ಪುತ್ರನ ದರ್ಪ, ದಬ್ಬಾಳಿಕೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಹಾಗೂ ಪ್ರಶ್ನೆ ಮಾಡಿದಲ್ಲಿ ಅಂತವರಿಗೆ ಉಳಿಗಾಲವಿಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾದಂತಾಗಿದೆ.

Leave a Reply

comments

Related Articles

error: