ದೇಶ

ಗುಂಡಿಕ್ಕಿ `ರೈಸಿಂಗ್ ಕಾಶ್ಮೀರ್’ ಪತ್ರಿಕೆ ಸಂಪಾದಕ ಶುಜಾತ್ ಬುಖಾರಿ ಹತ್ಯೆ

ಶ್ರೀನಗರ,ಜೂ.15-ಹಿರಿಯ ಪತ್ರಕರ್ತ ಹಾಗೂ `ರೈಸಿಂಗ್‌ ಕಾಶ್ಮೀರ್‌’ ಪತ್ರಿಕೆಯ ಸಂಪಾದಕ ಶುಜಾತ್‌ ಬುಖಾರಿ ಅವರನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಇಫ್ತಾರ್‌ ಕೂಟವೊಂದರಲ್ಲಿ ಪಾಲ್ಗೊಳ್ಳಲು ಗುರುವಾರ ಸಂಜೆ ತಮ್ಮ ಪತ್ರಿಕಾ ಕಚೇರಿಯಿಂದ ಶಜಾತ್‌ ಹೊರಟ ಸಂದರ್ಭದಲ್ಲಿ ಅಪರಿಚಿತ ಬಂದೂಕುಧಾರಿಗಳು ಶುಜಾತ್ ಬುಖಾರಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಶುಜಾತ್‌ ಮತ್ತು ಅವರ ಅಂಗರಕ್ಷಕ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಓರ್ವ ಪೊಲೀಸ್‌ ಪೇದೆ ಹಾಗೂ ಓರ್ವ ನಾಗರಿಕ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅವರಿಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಜಾತ್‌ ಹತ್ಯೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ವಿವಿಧ ಪತ್ರಕರ್ತ ಸಂಘಟನೆಗಳು ಘಟನೆಯನ್ನು ತೀವ್ರವಾಗಿ ಖಂಡಿಸಿವೆ.

ಶುಜಾತ್ ಬುಖಾರಿ ಹತ್ಯೆ ಹೇಯ ಕೃತ್ಯ. ಇದು ಕಾಶ್ಮೀರಪರ ಧ್ವನಿಯನ್ನು ಹತ್ತಿಕ್ಕುವ ಹುನ್ನಾರ. ಅವರೊಬ್ಬ ಸಾಹಸಿ ಹಾಗೂ ನಿರ್ಭೀತ ಪತ್ರಕರ್ತ. ಅವರ ಹತ್ಯೆಯಿಂದ ತೀವ್ರ ಆಘಾತ ಹಾಗೂ ದುಃಖವಾಗಿದೆ ಎಂದು ಗೃಹಸಚಿವ ರಾಜ್‌ನಾಥ್ ಸಿಂಗ್ ತಿಳಿಸಿದ್ದಾರೆ.

ಶುಜಾತ್ ಹತ್ಯೆಯಾಗುವ ಕೆಲ ಹೊತ್ತಿನ ಮುನ್ನ ತಮ್ಮ ಪತ್ರಿಕಾ ಧರ್ಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ದೆಹಲಿ ಮೂಲದ ಪತ್ರಕರ್ತರೊಬ್ಬರು ಬುಖಾರಿ ವಿರುದ್ಧ ಕಾಶ್ಮೀರ ಬಗ್ಗೆ ಪಕ್ಷಪಾತ ವರದಿ ಮಾಡುತ್ತಿದ್ದೀರಿ ಎಂದು ಆಪಾದಿಸಿದಾಗ ಟ್ವಿಟ್ಟರ್‌ನಲ್ಲಿ ತಮ್ಮ ಪತ್ರಿಕಾಧರ್ಮವನ್ನು ಬುಖಾರಿ ಸಮರ್ಥನೆ ಮಾಡಿಕೊಂಡಿದ್ದರು.

ಜತೆಗೆ ಕಣಿವೆ ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಗೆಗಿನ ವಿಶ್ವಸಂಸ್ಥೆ ವರದಿಯನ್ನು ಪೋಸ್ಟ್ ಮಾಡಿದ್ದರು. ಬುಖಾರಿ ತಮ್ಮ ಕೊನೆಯ ಟ್ವಿಟ್ ನಲ್ಲಿ ಮೊಟ್ಟಮೊದಲ ಬಾರಿಗೆ ಕಾಶ್ಮೀರ ಬಗೆಗಿನ ವಿಶ್ವಸಂಸ್ಥೆಯ ಮಾನವಹಕ್ಕು ವರದಿ ಬಹುಉಲ್ಲಂಘನೆ ಪ್ರಕರಣಗಳ ಬಗ್ಗೆ ಅಂತಾರಾಷ್ಟ್ರೀಯ ತನಿಖೆಗೆ ಕರೆ ನೀಡಿದೆ ಎಂದು ಹೇಳಿದ್ದರು. ಸದಾ ಈ ಬಗ್ಗೆ ಗಟ್ಟಿ ಧ್ವನಿ ಎತ್ತುತ್ತಿದ್ದ ಬುಖಾರಿ ಮತ್ತೊಂದು ಟ್ವಿಟ್‌ನಲ್ಲಿ, ಕಾಶ್ಮೀರದಲ್ಲಿ ನಾವು ಹೆಮ್ಮೆಯಿಂದ ಪತ್ರಿಕೋದ್ಯಮ ನಡೆಸುತ್ತಿದ್ದೇವೆ. ರಾಜ್ಯದ ವಾಸ್ತವ ಚಿತ್ರಣವನ್ನು ಹೈಲೈಟ್ ಮಾಡುವುದು ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದರು.

ಬುಖಾರಿ ಅವರು ಈ ಹಿಂದೆ ‘ದಿ ಹಿಂದು’ ಪತ್ರಿಕೆಯ ಕಾಶ್ಮೀರ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಕಾಶ್ಮೀರದಲ್ಲಿ ಹಲವಾರು ಶಾಂತಿ ಸಭೆಗಳನ್ನು ಆಯೋಜಿಸುವಲ್ಲಿ ಬುಖಾರಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈ ಹಿಂದೆ 2000ರಲ್ಲೂ ಅವರ ಮೇಲೆ ದಾಳಿ ಯತ್ನ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆಯನ್ನು ಒದಗಿಸಲಾಗಿತ್ತು.  (ಎಂ.ಎನ್)

Leave a Reply

comments

Related Articles

error: