
ಮೈಸೂರು
ಶಾಲಾ ಕಾಲೇಜು ವಾಹನಗಳ ತಪಾಸಣಾ ಕಾರ್ಯಾಗಾರ : ನಿಯಮವನ್ನು ಪಾಲಿಸದಿದ್ದಲ್ಲಿ ಸೂಕ್ತ ಕ್ರಮ;ಡಾ.ಸಿ.ಟಿ.ಮೂರ್ತಿ
ಮೈಸೂರು,ಜೂ.15:- ಶಾಲಾ ವಾಹನ ನಿರ್ವಹಣೆಯಲ್ಲಿ ಸುಪ್ರೀಂಕೋರ್ಟ್ ಗೈಡ್ ಲೈನ್ಸ್ ಏನಿದೆ ಅದನ್ನು ಪಾಲಿಸುತ್ತಾ ಇದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಲು, ಆ ಕುರಿತು ಅರಿವು ಮೂಡಿಸಲು ಶಾಲಾವಾಹನಗಳ ತಪಾಸಣಾ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ ಎಂದು ಜಂಟಿ ಸಾರಿಗೆ ಆಯುಕ್ತ ಡಾ.ಸಿ.ಟಿ.ಮೂರ್ತಿ ತಿಳಿಸಿದರು.
ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿಂದು ಸಾರಿಗೆ ಇಲಾಖೆಯ ಮೈಸೂರು(ಪಶ್ಚಿಮ) ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕಚೇರಿ ಮತ್ತು ಮೈಸೂರು(ಪೂರ್ವ) ಪ್ರಾದೇಶಕ ಸಾರಿಗೆ ಅಧಿಕಾರಿಯವರ ಕಚೇರಿ ವತಿಯಿಂದ ಮೈಸೂರು ನಗರದ ಎಲ್ಲಾ ಶಾಲಾ ಕಾಲೇಜು ವಾಹನಗಳ ತಪಾಸಣಾ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಮೈಸೂರು ವ್ಯಾಪ್ತಿಯಲ್ಲಿ ಮೈಸೂರು ಪಶ್ಚಿಮ ಪೂರ್ವ ಎರಡೂ ಕಚೇರಿ ಒಳಗೊಂಡಂತೆ ಶಾಲಾ ವಾಹನಗಳ ಪರಿಶಿಲನೆ ಮತ್ತು ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಎಲ್ಲಾ ಶಾಲೆಗಳು ಇತ್ತೀಚೆಗೆ ಆರಂಭವಾಗಿದೆ. ಶಾಲಾ ಮಕ್ಕಳ ಸುರಕ್ಷತೆ ಮತ್ತು ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಶಾಲಾವಾಹನ ತಪಾಸಣೆ ಮಾಡಿ ಅವು ಸುಸ್ಥಿಯಲ್ಲಿರುವ ಕುರಿತು ದೃಢೀಕರಿಸುವ ವ್ಯವಸ್ಥೆ ನಡೆಸುತ್ತಿದ್ದೇವೆ. ಈ ವಾಹನವನ್ನು ನಾವು ರಸ್ತೆ ಮೇಲೆ ನಿಲ್ಲಿಸಿ ತಪಾಸಣೆ ಮಾಡಿದರೆ ಶಾಲಾ ಮಕ್ಕಳಿಗೂ , ಇತರೇ ವಾಹನಗಳಿಗೂ ಸಮಸ್ಯೆ ಆಗುವುದರಿಂದ ಎಲ್ಲಾ ವಾಹನಗಳನ್ನು ಕರೆಯಿಸಿ ಸುರಕ್ಷತೆಯ ಕುರಿತು ಅರಿವು ಮೂಡಿಸುವ ಜೊತೆಗೆ ವಾಹನಗಳು ಸುರಕ್ಷಿತವಾಗಿವೆಯೇ ಎಂದು ತಪಾಸಣೆ ಮಾಡುತ್ತಿದ್ದೇವೆ ಎಮದರು. ಮುಖ್ಯವಾಗಿ ಪ್ರತೀ ವಾಹನ, ವಾಹನ ಚಾಲಕರು ಶಾಲಾ ವಾಹನ ನಿರ್ವಹಣೆಯ ಬಗ್ಗೆ ಸುಪ್ರೀಂಕೋರ್ಟ್ ಗೈಡ್ ಲೈನ್ಸ್ ಏನಿದೆ ಅದನ್ನು ಪಾಲಿಸುತ್ತ ಇದ್ದಾರೋ, ಇಲ್ಲವೋ ಎಂದು ಸಾರಿಗೆ ಅಧಿಕಾರಿಗಳು ತಿಳಿದುಕೊಳ್ಳುತ್ತಾರೆ. ಇಂದು 300 ವಾಹನಗಳ ನಿರೀಕ್ಷೆಯಿದ್ದು, ಪ್ರತಿಯೊಬ್ಬರ ಬಳಿಯೂ ವಾಹನದ ವಿಮೆ, ವಾಹನ ಚಾಲನಾ ಪರವಾನಗಿ, ಮಾಲಿನ್ಯ ನಿಯಂತ್ರಣ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ನಿರ್ವಾಹಕರು ಸರಿಯಾಗಿ ನಿರ್ವಹಿಸುತ್ತಿದ್ದಾರೋ ಇಲ್ಲವೋ, ವೇಗ ನಿಯಂತ್ರಕವಿದೆಯೋ ಇಲ್ಲವೋ ಎಂಬುದರ ತಪಾಸಣೆ ನಡೆಸಿದ್ದೇವೆ. ಈಗ ಈ ಕುರಿತು ಅವರಲ್ಲಿ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ರಸ್ತೆಯಲ್ಲಿಯೇ ಚೆಕ್ ಮಾಡಲಾಗುತ್ತಿದ್ದು, ನಿಯಮವನ್ನು ಪಾಲಿಸದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾ ಸಾರಿಗೆ ಆಯುಕ್ತ ಪ್ರಭುಸ್ವಾಮಿ ಮತ್ತಿತರರಿದ್ದರು. (ಜಿ.ಕೆ,ಎಸ್.ಎಚ್)