ಮೈಸೂರು

ವಿಧಾನ ಪರಿಷತ್ ಹಾಗೂ ನಿಗಮ ಮಂಡಳಿಗೆ ನೇಮಿಸಲು ಮಡಿವಾಳ ಸಂಘದಿಂದ ಒತ್ತಾಯ

ಮೈಸೂರು,ಜೂ.15 : ಸಮುದಾಯದ ಒಬ್ಬರಿಗೆ ವಿಧಾನ ಪರಿಷತ್ ಗೆ ನೇಮಕ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸೇರಿದಂತೆ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಮೈಸೂರು ಜಿಲ್ಲಾ ಮಡಿವಾಳರ ಸಂಘವು ಆಗ್ರಹಿಸಿತು.

ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವುದು ಹಿಂದುಳಿದ ಸಮುದಾಯವಾದ ಮಡಿವಾಳರಿಗೆ ದುಸ್ತರವಾಗಿದ್ದು ಆದ್ದರಿಂದ ನಾಮ ನಿರ್ದೇಶನದ ಮೂಲಕ ಸಮುದಾಯಕ್ಕೆ ರಾಜಕೀಯ ನ್ಯಾಯ ನೀಡಬೇಕೆಂದು ಸಂಘದ ಉಪಾಧ್ಯಕ್ಷ ಎಸ್.ಜೆ.ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಪ್ರತಿ ಕ್ಷೇತ್ರದಲ್ಲಿಯೂ ಸುಮಾರ 10ಸಾವಿರಕ್ಕೂ ಅಧಿಕ ಮತದಾರರಿದ್ದು, ಕಳೆದ ಚುನಾವಣೆಯಲ್ಲಿ ಈ ಭಾಗದ ಮಡಿವಾಳರು ಜೆಡಿಎಸ್ ಅನ್ನು ಬೆಂಬಲಿಸಿದ್ದರಿಂದ ಐದು ಜನ ಶಾಸಕರು ಆಯ್ಕೆಯಾಗಲು ಸಾಧ್ಯವಾಗಿದೆ, ಆದ್ದರಿಂದ ಜೆಡಿಎಸ್ ನ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಕೆ.ವಿ.ಅಮರನಾಥ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಗೊಳಿಸಿ ಹಾಗೂ ಪ್ರತಿ ಜಿಲ್ಲೆಯ ಒಬ್ಬ ಮುಖಂಡನನ್ನು ನಿಗಮ ಮಂಡಳಿಗೆ ನೇಮಕಗೊಳಿಸಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಒತ್ತಾಯಿಸಿದರು.

ಪರಿಶಿಷ್ಟ ಜಾತಿಗೆ ಸೇರಿಸುತ್ತೇವೆ ಎಂದು ಹಿಂದಿನ ಕಾಂಗ್ರೆಸ್ ಸರ್ಕಾರ ಸಮುದಾಯಕ್ಕೆ ಅನ್ಯಾಯ ಮಾಡಿದ್ದು, ಈ ಅನ್ಯಾಯವನ್ನು ಸರಿಪಡಿಸಲು ಈಗಿನ ಸಮ್ಮಿಶ್ರ ಸರ್ಕಾರದಲ್ಲಿ ಸಮುದಾಯದವರಿಗೆ ರಾಜಕೀಯ ಆದ್ಯತೆ ನೀಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಅಧ್ಯಕ್ಷ ಚಂದ್ರಶೇಖರ್ ಭೈರಿ, ಕಾರ್ಯಾಧ್ಯಕ್ಷ ಎಂ.ರಾಜು, ಚನ್ನಕೇಶವ, ಮಹಿಳಾ ಅಧ್ಯಕ್ಷೆ ಕೆ.ಎಂ.ವಸಂತಕುಮಾರಿ ಇನ್ನಿತರರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: