ಪ್ರಮುಖ ಸುದ್ದಿ

ಡಾ.ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾದ ಸರ್ಕಾರ ರಾಜ್ಯದಲ್ಲಿದೆ : ಶಾಸಕ ಕೆ.ಜಿ.ಬೋಪಯ್ಯ ಆರೋಪ

ರಾಜ್ಯ(ಮಡಿಕೇರಿ) ಜೂ.15 :- ಜನರಿಂದ ಜನರಿಗಾಗಿ ಸರ್ಕಾರ ಎನ್ನುವ ಮಾತಿಗೆ ತದ್ವಿರುದ್ಧವಾಗಿ, ಸಂವಿಧಾನ ರಚಿಸಿದ ಡಾ.ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾದ ಸರ್ಕಾರ ರಾಜ್ಯದಲ್ಲಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಆರೋಪಿಸಿದ್ದಾರೆ.

ಮಡಿಕೇರಿ ನಗರ ಮತ್ತು ತಾಲ್ಲೂಕು ಭಾರತೀಯ ಜನತಾ ಪಾರ್ಟಿಯ ವತಿಯಿಂದ ನಗರದ ಕ್ರಿಸ್ಟಲ್ ಹಾಲ್ ಸಭಾಂಗಣದಲ್ಲಿ ನಡೆದ ‘ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ’ದಲ್ಲಿ ಪಾಲ್ಗೊಂಡು ಮಾತನಾಡಿದರು.

ಭ್ರಷ್ಟಾಚಾರದ ಕೂಪಕ್ಕೆ ರಾಜ್ಯವನ್ನು ತಳ್ಳಿರುವ ಪಕ್ಷ ಇಂದು ಸಮ್ಮಿಶ್ರ ಸರ್ಕಾರದ ಭಾಗವಾಗಿದೆ ಎಂದು ಟೀಕಿಸಿದ ಶಾಸಕ ಬೋಪಯ್ಯ,  ಜನರಿಂದ ತಿರಸ್ಕೃತರಾದವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಂತಹವರಿಗೆ ಜಾತ್ಯತೀತವಾದದ ಬಗ್ಗೆ ಮಾತನಾಡುವ ಯಾವ ಹಕ್ಕಿದೆ ಎಂದು ಗುಡುಗಿದ ಅವರು ಚುನಾವಣೆಯಲ್ಲಿ ಮನೆಗೆ ಹೋಗಿ ಎಂದು, ಕರ್ನಾಟಕಕ್ಕೆ ಅಗತ್ಯವಿಲ್ಲವೆಂದು ಜನರಿಂದ ಸಂದೇಶ ಪಡೆದವರು ಸರ್ಕಾರ ರಚಿಸಿರುವುದು ಸಂವಿಧಾನ ಬದ್ಧವೆ ಎಂದು ಪ್ರಶ್ನಿಸಿದರು. ತಿಂಗಳು ಕಳೆದರು ರಾಜ್ಯದ ನೂತನ ಸರ್ಕಾರ ಟೇಕ್ ಆಫ್ ಆಗಿಲ್ಲವೆಂದು ವ್ಯಂಗ್ಯವಾಡಿದರು. ಭಾರೀ ಮಳೆಯಿಂದ ಮಾಕುಟ್ಟ ರಸ್ತೆ ಸಂಪೂರ್ಣ ಹದಗೆಟ್ಟ ಸಂದರ್ಭ ಕೇರಳದ ಕಂದಾಯ ಸಚಿವರು ಸ್ಥಳಕ್ಕೆ ಬಂದು ಪರಿಶೀಲಿಸುತ್ತಾರೆ. ಆದರೆ, ರಾಜ್ಯದಲ್ಲಿ ರಚನೆಯಾಗಿರುವ ಸರ್ಕಾರದ ಮಂತ್ರಿಗಳು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ಬೋಪಯ್ಯ ಖಾತೆಗಾಗಿ ಕ್ಯಾತೆ ತೆಗೆಯುತ್ತಿರುವ ಈ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಇರುವುದಿಲ್ಲವೆಂದು ಭವಿಷ್ಯ ನುಡಿದರು.

ಪರಸ್ಪರ ದೋಷಾರೋಪಣೆ ಮಾಡುತ್ತಲೆ ಬಂದಿದ್ದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಇದೀಗ ಸರ್ಕಾರ ರಚನೆಯಲ್ಲಿ ಒಂದಾಗಿದ್ದಾರೆ ಎಂದು ಟೀಕಿಸಿದ ಅಪ್ಪಚ್ಚು ರಂಜನ್, ಈ ಸರ್ಕಾರ ಹೆಚ್ಚುಕಾಲ ಉಳಿಯುವುದಿಲ್ಲ. ಆರು ತಿಂಗಳಲ್ಲಿ ಮತ್ತೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯೊಂದಿಗಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 20 ತಿಂಗಳ ಅಧಿಕಾರ ನಡೆಸಿ ಬಳಿಕ ಬಿಜೆಪಿಗೆ ಅಧಿಕಾರ ಬಿಟ್ಟು ಕೊಡದ ವಚನಭ್ರಷ್ಟ ಕುಮಾರಸ್ವಾಮಿ ಅವರು, ರಾಜ್ಯದ ರೈತರ 53 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡುವುದಿಲ್ಲ. ರೈತರನ್ನು ಮಣ್ಣು ಮಾಡುತ್ತಾರಷ್ಟೆ ಎಂದು ಟೀಕಿಸಿದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ಚುನಾವಣೆಯ ಹಂತಗಳಲ್ಲಿನ ಜಾತೀಯತೆಯ ಸಂಕುಚಿತ ಭಾವನೆಯಿಂದ ಹೊರಬರುವುದು ಅತ್ಯವಶ್ಯ. ಚುನಾವಣೆಯಲ್ಲಿ ಜಾತಿಯೇ ಮುಖ್ಯವಾಗಿದ್ದಲ್ಲಿ ಕೇವಲ ಶೇ.0.2 ರಷ್ಟು ಜನಸಂಖ್ಯೆ ಇರುವ ಗಾಣಿಗ ಸಮೂಹದ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲವೆಂದು ತಿಳಿಸಿದರು.

48 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಈ ದೇಶಕ್ಕೆ ಯಾವ ಕೊಡುಗೆ ನೀಡಿದೆ ಮತ್ತು ಕೇವಲ 48 ತಿಂಗಳ ಬಿಜೆಪಿ ಸರ್ಕಾರ ಏನು ಮಾಡಿದೆ ಎನ್ನುವ ವಿವರವಾದ ಹೊತ್ತಿಗೆಯೊಂದನ್ನು ಸಿದ್ದಪಡಿಸಿದ್ದು, ಅದನ್ನು ನಾಳೆ ತಾನು ಮೈಸೂರಿನಲ್ಲಿ ಸುತ್ತೂರು ಶ್ರೀಗಳಿಗೆ ಹಸ್ತಾಂತರಿಸುತ್ತೇನೆ. ಜಿಲ್ಲೆಯಲ್ಲಿ ಇಬ್ಬರು ಶಾಸಕರು ಅದನ್ನು ಜನತೆಗೆ ತಲುಪಿಸಲಿದ್ದಾರೆ ಎಂದರು. ಪ್ರಸ್ತುತ ವಿರೋಧ ಪಕ್ಷಗಳೆಲ್ಲವು ಮೋದಿ ವಿರುದ್ಧ ದ್ರುವೀಕರಣಗೊಳ್ಳುತ್ತಿವೆ. ಇದಕ್ಕೆ ಕಾರಣ, ಮತ್ತೊಮ್ಮೆ ಮೋದಿ ಅವರು ಪ್ರಧಾನಿಯಾದರೆ ತಮಗೆ ಉಳಿಗಾಲವಿಲ್ಲವೆಂದು ಅವರು ಅರಿತಿದ್ದಾರೆ. ಅತ್ಯುತ್ತಮವಾದ ರೀತಿಯಲ್ಲಿ ಮೋದಿ ಕಾರ್ಯ ನಿರ್ವಹಿಸಿರುವುದೇ ವಿರೋಧ ಪಕ್ಷಗಳು ಒಂದಾಗುವುದಕ್ಕೆ ಕಾರಣ, ಇಲ್ಲವಾದರೆ ಇವರು ಒಂದಾಗುತ್ತಿದ್ದರೆ ಎಂದು ಪ್ರಶ್ನಿಸಿದರು. ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮೊದಲ ದರ್ಜೆ, ಕಾಂಗ್ರೆಸ್‍ಗೆ ದ್ವಿತೀಯ ದರ್ಜೆ ದೊರಕಿದ್ದು, ಇದೀಗ ಮೂರನೇ ದರ್ಜೆ ದೊರಕಿದವರು ಮುಖ್ಯ ಮಂತ್ರಿಗಳಾಗಿದ್ದಾರೆ ಎಂದು ಟೀಕಿಸಿದರು. ಈ ಸರ್ಕಾರ ಮುಂದಿನ ನಾಲ್ಕು ತಿಂಗಳಲ್ಲಿ ಪಥನವಾಗಲಿದ್ದು, ನಂತರ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಆ ಸಂದರ್ಭ ಜಿಲ್ಲೆಯ ಜನತೆಗೆ ಬೇಡವಾದ ಟಿಪ್ಪು ಜಯಂತಿ ರದ್ದು ಪಡಿಸುವುದಾಗಿ ತಿಳಿಸಿದರು.    (ಕೆಸಿಐ,ಎಸ್.ಎಚ್)

Leave a Reply

comments

Related Articles

error: