
ಮೈಸೂರು
ದೃಷ್ಟಿ ದೋಷವಿರುವವರಿಗೆ ಉತ್ತೇಜನ : ವಿಭಿನ್ನ ರ್ಯಾಲಿ
ರೌಂಡ್ ಟೇಬಲ್ ಇಂಡಿಯಾದ ಮೈಸೂರು ಶಾಖೆಯಾಗಿರುವ ಮೈಸೂರು ಅಮಿಟಿ ರೌಂಡ್ ಟೇಬಲ್ 156, ಬಿ ಮೈ ಸೈಟ್ ಹೆಸರಿನ ಸಮಯ-ವೇಗ-ದೂರ ಅವಲಂಬಿತ ವಿಶೇಷ ಕಾರು ರ್ಯಾಲಿಯನ್ನು ಭಾನುವಾರ ಮೈಸೂರಿನಲ್ಲಿ ಆಯೋಜಿಸಿತ್ತು.
ರ್ಯಾಲಿಗೆ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸಾಮಾನ್ಯ ಜನ ಹಾಗೂ ದೃಷ್ಟಿ ದೋಷವಿರುವವರ ನಡುವೆ ಸಂಪರ್ಕವೇರ್ಪಡಿಸುವ ಈ ಬಿ ಮೈ ಸೈಟ್ ರ್ಯಾಲಿಯಿಂದ ನಾನು ಪ್ರೇರಿತನಾಗಿದ್ದೇನೆ. ಮಾರ್ಟ್ 156 ಸಮಾಜಕ್ಕಾಗಿ ಮಾಡುತ್ತಿರುವ ಈ ಕಾರ್ಯ ನಿಜಕ್ಕೂ ಸ್ಲಾಘನೀಯ. ಶಾಲೆಗಳಲ್ಲಿ ತರಗತಿ ಕೊಠಡಿ ಮತ್ತು ಶೌಚಾಲಯ ನಿರ್ಮಿಸಲು ಆಲೋಚಿಸಿರುವುದು ಉತ್ತಮ ಆಲೋಚನೆ. ಈ ಪ್ರಯತ್ನಕ್ಕಾಗಿ ನಾನು ಪ್ರತಿಸ್ಪರ್ಧಿಗಳನ್ನೂ ಮಾರ್ಟ್ 156ನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದರು.
ಮಾರ್ಟ್ 156 ಅಧ್ಯಕ್ಷ ಕಿರಣ್ ವಿ.ರಂಗಾ ಮಾತನಾಡಿ ದೃಷ್ಟಿದೋಷವಿರುವವರಲ್ಲಿ ಸವಾಲುಗಳನ್ನು ಎದುರಿಸಿ ಆತ್ಮವಿಶ್ವಾಸ ಬೆಳೆಯಲು ಸಹಕಾರಿಯಾಗಲೆಂದು ಈ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಸಾರ್ವಜನಿಕರು ಬೆಂಬಲ ನೀಡಿದ್ದಾರೆ. ನಮ್ಮ ಸಮಾಜದ ಅವಕಾಶ ವಂಚಿತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವು ನಮ್ಮ ಆದ್ಯತೆಯನ್ನು ಇನ್ನೂ ಹೆಚ್ಚು ಬಲಪಡಿಸಲಿದ್ದೇವೆ ಎಂದು ತಿಳಿಸಿದರು.
ಒಂಭತ್ತು ಸಂಸ್ಥೆಗಳಿಂದ ಬಂದಿದ್ದ ಸುಮಾರು 65 ದೃಷ್ಟಿ ದೋಷವಿರುವ ಮಾರ್ಗದರ್ಶಕರು, 65 ಕಾರುಗಳಲ್ಲಿ 180 ಸ್ಪರ್ಧಿಗಳೊಂದಿಗೆ ಪಾಲ್ಗೊಂಡಿದ್ದರು. ರ್ಯಾಲಿಯು 90ಕಿ.ಮೀ.ದೂರ ಕ್ರಮಿಸಿತು.