ಕರ್ನಾಟಕ

ಹಾಸನ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಖಚಿತ: ಸಚಿವ ಎಚ್.ಡಿ.ರೇವಣ್ಣ

ಹಾಸನ (ಜೂನ್ 16): ಹಾಸನ ನಗರದ ಹೊರ ವಲಯದಲ್ಲಿ ಈಗಾಗಲೆ ಕಾಯ್ದಿರಿಸಿರುವ ಸುಮಾರು 500ಕ್ಕೂ ಅಧಿಕ ಎಕರೆ ಜಮೀನಿನಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭವಾಗುವ ನಿರೀಕ್ಷೆ ಇದೆ ಎಂದು ಲೋಕೋಪಯೋಗಿ ಸಚಿವರಾದ ರೇವಣ್ಣ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ ಅವರ ಪ್ರಯತ್ನದ ಫಲವಾಗಿ ವಿಮಾನ ನಿಲ್ದಾಣ ಸ್ಥಾಪನೆ ಸನಿಹವಾಗಿದೆ. ಕೇಂದ್ರ ನಾಗರೀಕ ವಿಮಾನಯಾನ ಸಚಿವರು ಈ ಬಗ್ಗೆ ಪತ್ರ ಬರೆದಿದ್ದು ಹಾಲಿ ಲಭ್ಯವಿರುವ ಜಮೀನಿನ ಜೊತೆಗೆ ಇನ್ನೂ 200 ಎಕರೆ ಹೆಚ್ಚುವರಿ ಭೂಮಿ ಒದಗಿಸಿದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಲಭ್ಯತೆಯ ಅನುಸಾರ ಭೂಮಿಯನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಇಷ್ಟು ವರ್ಷ ಬರಗಾಲದಿಂದ ನಷ್ಟ ಅನುಭವಿಸುತ್ತಿದ್ದ ಜಿಲ್ಲೆಯ ಆಲೂಗೆಡ್ಡೆ ಬೆಳೆಗಾರರು ಈ ವರ್ಷ ಸುರಿದ ಭಾರೀ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮುಖ್ಯ ಮಂತ್ರಿಯವರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಈ ವರ್ಷ ಮುಂಗಾರು ಜಿಲ್ಲೆಯಲ್ಲಿ ಸಾಕಷ್ಟು ನಷ್ಟ ಉಂಟು ಮಾಡಿದೆ 8000 ಎಕ್ಟೇರ್ ಪ್ರದೇಶದಲ್ಲಿ ಆಲೂಗೆಡ್ಡೆ ಬೆಳೆ ಹಾನಿಯಾಗಿದೆ ಅಲ್ಲದೆ ಹೊಗೆಸೊಪ್ಪು, ಹಲಸಂದೆ, ತಡ್ನಿ ಸೇರಿದಂತೆ ತರಕಾರಿ ಬೆಳೆದ ಭೂ ಪ್ರದೇಶವು ನಷ್ಟ ಸಂಭವಿಸಿದೆ ಇದರ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಕೃಷಿ ಮತ್ತು ತೋಟಗಾರಿಕಾ ಇಲಾಖಾ ಆಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.

ಮಳೆಯಿಂದ ಉಂಟಾಗಿರುವ ಹಾನಿಗಳಿಗೆ ಪರಿಹಾರ ನೀಡುವಂತೆ ಕಂದಾಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಯಾವುದೇ ಆದೇಶಗಳಿಗೆ ಕಾಯದೆ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳಲು ಎಲ್ಲಾ ಇಂಜಿನಿಯರ್‍ಗಳಿಗೆ ಆದೇಶ ನೀಡಲಾಗಿದೆ ಎಂದು ಅವರು ತಿಳಿಸಿದರು.

ಮುಂದಿನ 4 ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸ ಕೈಗೊಂಡು ಅಲ್ಲಿ ಆಗಬೇಕಿರುವ ಲೋಕೋಪಯೋಗಿ ಇಲಾಖಾ ಅಭಿವೃದ್ದಿ ಕಾರ್ಯಗಳ ಬಗ್ಗೆ ಪರಿಶಿಲಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಇದ್ದು ಅನೇಕ ನುರಿತ ತಜ್ಞ ವೈದ್ಯರಿದ್ದಾರೆ. ಹಾಗಿದ್ದೂ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಿಂದ ತುರ್ತು ಅಗತ್ಯ ಪ್ರಕರಣಗಳನ್ನು ಹೊರತುಪಡಿಸಿ ಯಾವುದೇ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವಂತಿಲ್ಲ ಈ ಬಗ್ಗೆ ಈಗಾಗಲೆ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದು ಲೋಪಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಯಾವುದೇ ಹಸ್ತಕ್ಷೇಪವಿಲ್ಲ:

ತಾವು ಯಾವುದೇ ಇತರ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಅಂತಹ ಅಗತ್ಯ ತಮಗಿಲ್ಲ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲೆಯೊಳಗಿನ ಅಭಿವೃದ್ದಿ ಕಾರ್ಯಗಳ ಬಗ್ಗೆ ಮಾತ್ರ ತಾವು ಗಮನ ಹರಿಸುತ್ತಿರುವುದಾಗಿ ಸಚಿವರು ಸ್ಪಪ್ಟಡಿಸಿದರು. ತಮ್ಮ ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ನಡುವಿನ ಬಾಂಧವ್ಯ ಉತ್ತಮವಾಗಿದೆ ಎಂದು ಅವರು ತಿಳಿಸಿದರು. (ಎನ್.ಬಿ)

Leave a Reply

comments

Related Articles

error: