
ಮೈಸೂರು
ನಂದಿನಾಥಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರತೆಗಳ ಸರಮಾಲೆ: ಅಧಿಕಾರಿಗಳ ನಿರ್ಲಕ್ಷ್ಯ
ಬೈಲಕುಪ್ಪೆ: ಅಗತ್ಯ ಸಿಬ್ಬಂದಿಗಳ ಕೊರತೆಯಿಂದಾಗಿ ಆರೋಗ್ಯ ಕೇಂದ್ರವಿದ್ದರೂ ಸಾರ್ವಜನಿಕರಿಗೆ ಸೂಕ್ತ ಆರೋಗ್ಯ ಸೇವೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ನಂದಿನಾಥಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ ಇದ್ದು ರೋಗಿಗಳು ತಪಾಸಣೆಗೆ ಹೋಗುವುದೊ ಬೇಡವೂ ಎಂಬ ಸ್ಥಿತಿಯಲಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕಡೆಗೆ ಮುಖ ಮಾಡುವಂತಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಸೇರಿದಂತೆ ಒಟ್ಟು 19 ಸಿಬ್ಬಂದಿಗಳ ಅಗತ್ಯವಿದ್ದು ಪ್ರಸ್ತುತ ಕೇವಲ 8 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 11 ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಕ್ಷೇತ್ರ ಭೇಟಿ ಕಾರ್ಯ ಸಮರ್ಪಕವಾಗಿ ನಡೆಯಾದಂತಾಗಿದೆ. ನಂದಿನಾಥಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಡುವ ಉಪ ಕೇಂದ್ರಗಳಾದ ಕುಂದನಹಳ್ಳಿ, ನವಿಲೂರು, ಬೇಗೂರು, ಚಿಟ್ಟೇನಹಳ್ಳಿ, ಮುತ್ತೂರು ಕೇಂದ್ರಗಳ ಒಟ್ಟು 43 ಗ್ರಾಮಗಳ ಜನತೆ ಸೂಕ್ತ ಆರೋಗ್ಯ ಸೇವೆ ಸಿಗದೆ ವಂಚಿತರಾಗುತ್ತಿದ್ದಾರೆ.
ಈ ವ್ಯಾಪ್ತಿಯಲ್ಲಿ 4,415 ಮನೆಗಳಿದ್ದು 5,192 ಕುಟುಂಬಗಳು ವಾಸವಾಗಿವೆ. 12,079 ಪುರುಷರು ಹಾಗೂ 10,916 ಮಹಿಳೆಯರೂ ಸೇರಿದಂತೆ ಒಟ್ಟು 22,995 ಜನಸಂಖ್ಯೆ ಇದೆ. ಕೇವಲ ಒಬ್ಬರು ಆರ್ಯವೈದ್ಯದ ವೈದ್ಯರಿದ್ದು ಉಳಿದಂತೆ ಒಬ್ಬರು ಶುಷ್ರೋಷಕಿ, ಒಬ್ಬರು ಔಷಧಿ ವಿತರಕರು, ಒಬ್ಬರು ಹಿರಿಯ ಆರೋಗ್ಯ ಸಹಾಯಕಿ, ಒಬ್ಬರು ಕಿರಿಯ ಆರೋಗ್ಯ ಸಹಾಯಕಿ, ಒಬ್ಬರು ಪ್ರೋಯೋಗ ಶಾಲೆಯ ತಂತ್ರಜ್ಞ, ಒಬ್ಬರು ಪ್ರಥಮ ದರ್ಜೆ ಸಹಾಯಕ, ಒಬ್ಬರು ಡಿ ಗ್ರೂಪ್ ನೌಕರ, ಇಬ್ಬರು ಕಿರಿಯ ಪುರುಷ ಆರೋಗ್ಯ ಸಹಾಯಕರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ.
“ನಾನು ಈ ಆಸ್ಪತ್ರೆಯಲ್ಲಿ ಕಳೆದ 20 ದಿನಗಳಿಂದ ಕರ್ತವ್ಯಕ್ಕೆ ಹಾಜರಾಗಿದ್ದು, ಸದ್ಯಕ್ಕೆ ಇಬ್ಬರು ಎ.ಎನ್.ಎಮ್, 3 ಜನ ಪಿ.ಎಚ್.ಸಿ. ಇದ್ದು, ಆಶಾ ಕಾರ್ಯಕರ್ತರ ಸಹಾಯದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಮಗೆ ಶುಶ್ರೂಷಕಿಯರ ಸಹಾಯ ಅಗತ್ಯವಿದೆ.
– ಡಾ. ಮಮ್ತಾಜ್
ಗ್ರಾಮೀಣ ಭಾಗದಲ್ಲಿ ಕ್ಷೇತ್ರ ಭೇಟಿ ಕಾರ್ಯ ಹೆಚ್ಚಿರುವುದರಿಂದ ಅಗತ್ಯವಿರುವ 6 ಕಿರಿಯ ಆರೋಗ್ಯ ಸಹಾಯಕಿಯರ ಪೈಕಿ ಪ್ರಸ್ತುತ ಒಬ್ಬರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದದರಿಂದ ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಮಕ್ಕಳ ಆರೋಗ್ಯ ಸೇವೆ ಕಾರ್ಯ ಮಂದಗತಿಯಿಂದ ಸಾಗುತ್ತಿದೆ. ಕ್ಷೇತ್ರ ಭೇಟಿ ಕಾರ್ಯವನ್ನು ಅನಿವಾರ್ಯವಾಗಿ ಒಬ್ಬರೇ ಆರೋಗ್ಯ ಸಹಾಯಕಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ಈ ಕೇಂದ್ರಕ್ಕೆ ಸರಿಸುಮಾರು 50 ರಿಂದ 60 ಮಂದಿ ಹೊರರೋಗಿಗಳು ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಪ್ರಸ್ತುತ ಆಯುರ್ವೇದ ವೈದ್ಯರಿರುವ ಕಾರಣ ಹಾಗೂ ಅಗತ್ಯ ಸಿಬ್ಬಂದಿಗಳ ಕೊರತೆಯಿಂದಾಗಿ ಸಾರ್ವಜನಿಕರು ಈ ಕೇಂದ್ರಕ್ಕೆ ಭೇಟಿ ನೀಡಲು ಹಿಂದು ಮುಂದು ನೋಡುತ್ತಿದ್ದು, ಭೇಟಿ ನೀಡುವವರ ಸಂಖ್ಯೆ 15 ರಿಂದ 20ಕ್ಕೆ ಇಳಿದಿದೆ.
ಚಾಲಕನಿಲ್ಲದೆ ನಿಂತಿರುವ ವಾಹನ
ಈ ಕೇಂದ್ರಕ್ಕೆ ಗಿರಿಜನ ಸಂಚಾರಿ ಆರೋಗ್ಯ ಚಿಕಿತ್ಸಾ ಘಟಕದ ಒಂದು ವಾಹನವಿದ್ದು ವರ್ಷದ ಹಿಂದಷ್ಟೇ ವಾಹನ ಚಾಲಕ ನಿವೃತ್ತಿಯಾಗಿದ್ದಾರೆ. ತದನಂತರ ಸಮೀಪದ ಕೊಪ್ಪ ಆರೋಗ್ಯ ಕೇಂದ್ರದಲ್ಲಿ ವಾಹನವನ್ನು ಸುಮ್ಮನೆ ನಿಲ್ಲಿಸಲಾಗಿದ್ದು ಪ್ರಯೋಜನಕ್ಕೆ ಬಾರದಂತಾಗಿದೆ.
ಬಸ್ ಸೌಕರ್ಯದ ಕೊರತೆ
ನಂದಿನಾಥಪುರಕ್ಕೆ ಸುತ್ತಮುತ್ತಲಿನಿಂದ ಸಾಕಷ್ಟು ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ರೋಗಿಗಳ ಖಾಸಗಿ ವಾಹನಗಳ ಮೊರೆ ಹೊಗಬೇಕಿದ್ದು ಕೆಲವು ಸಂದರ್ಭಗಳಲ್ಲಿ ರೋಗಿಗಳೂ ಸಹ ಕುಂದನಹಳ್ಳಿ ಸರ್ಕಲ್ನಿಂದಲೇ ನಡೆದುಕೊಂಡು ಕೇಂದ್ರ ತಲುಪಬೇಕಾದ ಅನಿವಾರ್ಯತೆ ಇದೆ.
ಹಾಡಿ ಜನರ ಪಾಡು ಕೇಳೊರಿಲ್ಲ
ಈ ಕೇಂದ್ರಕ್ಕೆ ಮಲಗನಕೆರೆ, ಆಯರಬೀಡು, ಲಿಂಗಾಪುರ, ಮುತ್ತೂರು ಕಾಲೋನಿ, ಹಳೆಕೆರೆ ಹಾಡಿ, ಆಯರಬೀಡು ಗಿರಿಜನ ಹಾಡಿಗಳು ಒಳಪಟ್ಟಿದ್ದು ಈ ಭಾಗದ ಗಿರಿಜನರು ಕೇಂದ್ರಕ್ಕೆ ಬರುವುದು ಕಷ್ಟದ ವಿಷಯವಾಗಿದೆ. ಅಲ್ಲದೇ ಇವರಿಗಾಗಿಯೇ ಇರುವ ಗಿರಿಜನ ಸಂಚಾರಿ ವಾಹನ ನಿಂತಲ್ಲೇ ನಿಂತಿರುವುದರಿಂದ ಹಾಡಿಗಳ ಜನರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವವರು ಇಲ್ಲದಂತಾಗಿದೆ.
ಔಷಧಿಯ ಕೊರತೆ
ಕೇಂದ್ರದಲ್ಲಿ ಅಗತ್ಯ ಔಷಧಿಗಳು ಲಭ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು ಪ್ರಾಥಮಿಕ ಅಗತ್ಯಗಳಾದ ಸಿರಿಂಜ್, ಗ್ಲೂಕೋಸ್, ಶೀತ, ನೆಗಡಿಗೆ ನೀಡುವ ಸಾಮಾನ್ಯ ಮಾತ್ರೆಗಳು, ಗಾಯಕ್ಕೆ ಸುತ್ತುವ ಬಟ್ಟೆ ಸಹ ಇಲ್ಲದಿರುವಾಗ ಚಿಕಿತ್ಸೆ ನೀಡುವುದು ಹೇಗೆ ಎಂಬುದು ಪ್ರಶ್ನೆಯಾಗಿದೆ.
ಔಷಧ ವಿತರಕರು ಸಹ ಅಪರೂಪಕ್ಕೆ ಒಮ್ಮೆ ಎಂಬಂತೆ ಕೇಂದ್ರಕ್ಕೆ ಬರುತ್ತಾರೆ ಎಂಬ ದೂರುಗಳು ಕೇಳಿಬರುತ್ತಿದ್ದು, ದಾದಿಯರೇ ಔಷಧ ಕೊಡುವ ಕೆಲಸವನ್ನು ನಿರ್ವಹಿಸುತ್ತಿರುತ್ತಾರೆ ಎನ್ನುತ್ತಾರೆ ರೋಗಿಗಳು.
ಇಷ್ಟೆಲ್ಲಾ ಸಮಸ್ಯೆಗಳಿರುವ, ಸಿಬ್ಬಂದಿಗಳ ಕೊರತೆ ಇರುವ ಆರೋಗ್ಯ ಕೇಂದ್ರದ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಮುಂದಾಗಬೇಕಿದೆ.
“ಈ ಭಾಗದಲ್ಲಿ ಸುಮಾರು 50 ಹಳ್ಳಿಗಳಿದ್ದು, ಅರಣ್ಯದಂಚಿನ ಗ್ರಾಮಸ್ಥರಿದ್ದರೂ, ಆರೋಗ್ಯ ಇಲಾಖೆಯ ಬೇಜವಾಬ್ದಾರಿತನದಿಂದ ಸಾಕಷ್ಟು ಜನ ಅನಾರೋಗ್ಯದಿಂದ ಬಳಲುತ್ತಿದ್ದರೂ ಈ ಆಸ್ಪತ್ರೆಗೆ ಹೋಗಲಾಗುತ್ತಿಲ್ಲ. ನಾಲ್ಕಾರು ಕಡೆ ಇದ್ದ ಉಪಕೇಂದ್ರಗಳು ಬಾಗಿಲು ಮುಚ್ಚಿಕೊಂಡಿವೆ. ಆರೋಗ್ಯ ಇಲಾಖೆ ಈ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರವೆ ಭರ್ತಿ ಹೊಂದಿಸಬೇಕು.
– ರಾಮು, ತಾಪಂ ಸದಸ್ಯರು
- ವರದಿ: ರಾಜೇಶ್