ಪ್ರಮುಖ ಸುದ್ದಿಮೈಸೂರು

ಭೂ ಅಕ್ರಮ ವ್ಯವಹಾರ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್​ ದಾಖಲಿಸಲು ಕೋರ್ಟ್ ಆದೇಶ

ಮೈಸೂರು,ಜೂ.18:- ಭೂ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್​ ದಾಖಲಿಸಲು ಮೈಸೂರಿನ 2ನೇ ಪ್ರಧಾನ ಸತ್ರ ನ್ಯಾಯಾಲಯ ಆದೇಶ ನೀಡಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಅವರಿಗೆ ಕಾನೂನು ಸಂಕಟ ಎದುರಾಗಿದೆ. 25 ವರ್ಷಗಳ ಹಿಂದೆ ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಖರೀದಿಸಿದ್ದ ನಿವೇಶನ ಸಂಬಂಧ ಈಗ ಕಾನೂನು ಸಂಕಟ ಅವರ ಕೊರಳಿಗೆ ಸುತ್ತಿಕೊಂಡಿದೆ. ಸೆಕ್ಷನ್​ 120ಬಿ, 197, 166, 167, 169, 200, 417, 409, 420 ಹಾಗೂ ಐಪಿಸಿ ಸೆಕ್ಷನ್​ 468 ಅಡಿ ಪ್ರಕರಣ ದಾಖಲಾಗಿದೆ.

ಗಂಗರಾಜು ಹಾಗೂ ಸಂಗಮೇಶ್ ಎಂಬ ವಕೀಲರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೇ ಈ ಪ್ರಕರಣ ಕೈಗೆತ್ತಿಕೊಂಡು ಕಾನೂನು ಹೋರಾಟ ಆರಂಭಿಸಿದ್ದರು. ರಾಜ್ಯಪಾಲರಿಗೂ ದೂರು ನೀಡಿದ್ದರು. ಇದಕ್ಕೆ ತಮ್ಮ ಅನುಮತಿ ಅಗತ್ಯವಿಲ್ಲವೆಂದು ರಾಜ್ಯಪಾಲರು ಸ್ಪಷ್ಟಪಡಿಸಿದ ಬಳಿಕ ಮೈಸೂರಿನ ಕೋರ್ಟ್​ ಮೊರೆ ಹೊಕ್ಕ ವಕೀಲರಿಗೆ ಈಗ ಫಲ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಸೇರಿ ನಾಲ್ವರ ವಿರುದ್ಧ 9 ಕ್ರಿಮಿನಲ್​ ಸೆಕ್ಷನ್​ಗಳಡಿ ಕೇಸ್​ ದಾಖಲಿಸಲು ಕೋರ್ಟ್​ ಆದೇಶಿಸಿದೆ. ಇಂದು ಸಂಜೆಯೊಳಗೆ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್​ ಠಾಣೆಯಲ್ಲಿ ಸಿದ್ದರಾಮಯ್ಯ ಸೇರಿ ನಾಲ್ವರ ವಿರುದ್ಧ ಎಫ್​.ಐ.ಆರ್. ದಾಖಲಾಗಲಿದೆ. 1988ರಲ್ಲೇ ವಿಜಯನಗರ 2ನೇ ಹಂತ ಬಡಾವಣೆ ನಿರ್ಮಾಣಕ್ಕೆ ಯೋಜಿಸಿದ್ದ ಮುಡಾ 535 ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು. ಆಗ ಈ ಜಾಗ ಹಿನಕಲ್​ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿತ್ತು. ಬಳಿಕ ಬಡಾವಣೆ ರಚಿಸಿ ಫಲಾನುಭವಿಗಳಿಗೆ ನಿವೇಶನ ಹಂಚಿದ ಬಳಿಕ ಆಗ ಹಿನಕಲ್​ ಗ್ರಾ.ಪಂ. ಅಧ್ಯಕ್ಷರಾಗಿದ್ದ ಪಾಪಣ್ಣ ಚಿಕ್ಕಮ್ಮ ಸಾಕಮ್ಮ, ಸಹೋದರ ಅಣ್ಣಯ್ಯ ಹಾಗೂ ಪತ್ನಿ ಸುನಂದ ಹೆಸರಿಗೆ ಸೇರಿದ್ದ 30 ಗುಂಟೆ ಜಮೀನು ಕೈಬಿಡುವಂತೆ 1997ರಲ್ಲಿ ಅಂದರೆ, ಸಿದ್ದರಾಮಯ್ಯ ಡಿಸಿಎಂ ಆಗಿದ್ದ ಸಂದರ್ಭ ಮುಡಾಕ್ಕೆ ಅರ್ಜಿ ಹಾಕಿದ್ದರು. ಮುಡಾ ಬಡಾವಣೆ ರಚಿಸಿದ ನಂತರವೂ 30 ಗುಂಟೆ ಜಾಗವನ್ನು ಮುಡಾ ಡಿನೋಟಿಫೈಗೆ ಅನುಮತಿ ನೀಡಿ ಎನ್​ಓಸಿ ಕೊಟ್ಟಿದ್ದು, ಕೇವಲ 17 ದಿನಗಳಲ್ಲೇ ಅಂದಿನ ಮೈಸೂರು ಜಿಲ್ಲಾಧಿಕಾರಿ ಭೂ ಪರಿವರ್ತನೆ ಮಾಡಿಕೊಟ್ಟಿದ್ದರು. ಆ ಬಳಿಕ ಆ ಪೈಕಿ ಸಾಕಮ್ಮ ಹೆಸರಿಗೆ 10 ಗುಂಟೆ ಜಾಗವನ್ನು ಸಿದ್ದರಾಮಯ್ಯ ಖರೀದಿ ಮಾಡಿದ್ದರು. ಅದೇ ಜಾಗದಲ್ಲಿ ಮನೆ ಕೂಡ ನಿರ್ಮಿಸಿದ್ದರು. 107-74 ಅಡಿ ಜಾಗಕ್ಕೆ ಬದಲಾಗಿ ಪಕ್ಕದ ಜಾಗವನ್ನು ಅತಿಕ್ರಮಿಸಿ 120-75 ಅಡಿ ಅಳತೆಯ ಮನೆ ನಿರ್ಮಿಸಿದ್ದರು.  ಆ ಬಳಿಕ ಕೆಲವೇ ವರ್ಷಗಳಲ್ಲಿ ಸಿದ್ದರಾಮಯ್ಯ ಆ ಮನೆಯನ್ನು ಮದ್ಯದ ದೊರೆ ಹರಿ ಖೋಡೆ ಅವರಿಗೆ ಮಾರಾಟ ಮಾಡಿದ್ದರು. 30 ಗುಂಟೆ ಜಾಗವನ್ನು ಆಗಲೇ ಮುಡಾ ಹಂಚಿದ್ದರಿಂದ ಆ ಪೈಕಿ ಒಬ್ಬರು ಮನೆ ನಿರ್ಮಿಸಿಕೊಂಡಿದ್ದ ಕಾರಣ ಈಗ 2017ರ ಡಿಸೆಂಬರ್​​ನಲ್ಲಿ ಸಾಕಮ್ಮ ನೀಡಿದ್ದ ಅರ್ಜಿಯನ್ನು ತರಾತುರಿಯಲ್ಲಿ ಪುರಸ್ಕರಿಸಿದ ಮುಡಾ 60-40 ಅಳತೆಯ ಬದಲಿ ನಿವೇಶನ ಮಂಜೂರು ಮಾಡಿತ್ತು. ಈ ಅಕ್ರಮದಲ್ಲಿ ಈಗಿನ ಮುಡಾ ಅಧ್ಯಕ್ಷ ಡಿ. ಧ್ರುವಕುಮಾರ್​, ಮುಡಾ ಆಯುಕ್ತ ಕಾಂತರಾಜ್​ ಭಾಗಿಯಾಗಿದ್ದರೆ, 1997ರಲ್ಲಿ ಮುಡಾ ಅಧ್ಯಕ್ಷರಾಗಿದ್ದ ಸಿ. ಬಸವೇಗೌಡ ಇದ್ದರು. ಹಾಗಾಗಿ ಈ ಮೂವರನ್ನು ಆರೋಪಿಗಳನ್ನಾಗಿ ಪ್ರಕರಣದಲ್ಲಿ ಕೋರ್ಟ್​ ಪರಿಗಣಿಸಿದೆ. ಸಿದ್ದರಾಮಯ್ಯ ಅವರಿಗೆ ಮಂಜೂರಾದ ನಿವೇಶನ ಮುಡಾ ವ್ಯಾಪ್ತಿಯಲ್ಲಿದ್ದರೂ ಹಿನಕಲ್​ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾತೆ ಮಾಡಿದರೆ, ಮನೆ ಕಟ್ಟಲು ಮುಡಾ ಪ್ಲಾನ್​ ಮಂಜೂರು ಮಾಡಿಕೊಟ್ಟಿತ್ತು. ಈ ವ್ಯವಹಾರಗಳನ್ನು ಮಾಡುವಾಗ ನಗರಾಭಿವೃದ್ಧಿ ಪ್ರಾಧಿಕಾರದ ಕಾಯಿದೆಗಳನ್ನು ಸಂಪೂರ್ಣ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಗಂಗರಾಜು ಹಾಗೂ ಸಂಗಮೇಶ್ ಸಲ್ಲಿಸಿದ ದೂರನ್ನು ಪುರಸ್ಕರಿಸಿರುವ ಮೈಸೂರು ಕೋರ್ಟ್​ ಸಿದ್ದರಾಮಯ್ಯ ಸಹಿತ ನಾಲ್ವರ ವಿರುದ್ಧ ಕೇಸ್​ ದಾಖಲಿಸಲು ಆದೇಶ ನೀಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: