ಕರ್ನಾಟಕ

18 ಲಕ್ಷ ಮೌಲ್ಯದ ವಾಹನಗಳ ವಶ: ಆರೋಪಿ ಬಂಧನ

ರಾಜ್ಯ(ಹಾಸನ) ಜೂ.18: ಮೋಟಾರ ಬೈಕ್ ,ಆಟೋ ರಿಕ್ಷಾ ಹಾಗೂ ಒಂದು ಸ್ಕಾರ್ಪಿಯೋ ಜೀಪ್ ಸೇರಿದಂತೆ ಒಟ್ಟು 18 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಅರಸೀಕೆರೆ ನಗರಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕ ನಾರಾಯಣ ತಿಳಿಸಿದ್ದಾರೆ.

ನಗರ ಠಾಣೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂತೇನಹಳ್ಳಿ ಮಾರಮ್ಮ ದೇವಸ್ಥಾನದ ಹತ್ತಿರ ವಾಸವಾಗಿದ್ದ ಮೊಹಮದ್ ರಫೀಕ್ ಅವರ ಮಗ ಟಿಪ್ಪು ಸುಲ್ತಾನ್ ಉರುಫ್ ಉಬೇದ್ (21) ಬಂಧಿತ ಆರೋಪಿಯಾಗಿದ್ದು ಈತ ಕಳೆದ ತಿಂಗಳು ಸುಭಾಷ್ ನಗರದ ಹನುಮಂತ ರಾಜು ಎಂಬವರಿಗೆ ಸೇರಿದ್ದ 45 ಸಾವಿರ ಬೆಲೆ ಬಾಳುವ ಡಿಯೋ ಮೋಟಾರ್ ಬೈಕ್‍ನ್ನು ಮೇ 20 ರಂದು ಅಪಹರಿಸಿದ್ದು ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಸಂಬಂಧ ಮೋಟಾರ್ ಬೈಕ್ ಕಳವು ಪ್ರಕರಣಗಳು ದಾಖಲಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ ಸದಾನಂದ ತಿಪ್ಪಣ್ಣ ನವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿ ಪತ್ತೆ ಕಾರ್ಯ ಕೈಗೊಂಡು ನಗರದ ಜೇನುಕಲ್ ಸ್ಟೇಡಿಯಂ ಹತ್ತಿರ ಅನುಮಾನಾಸ್ಪಾದವಾಗಿ ಮೋಟಾರ್ ಬೈಕಿನಲ್ಲಿ ಬಂದ ಆರೋಪಿ ಟಿಪ್ಪು ಸುಲ್ತಾನ್ ನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಯು ತಾನು ಕಳ್ಳತನ ಮಾಡಿದ್ದ ಹೋಂಡ ಡಿಯೋ ಬೈಕ್ ಜೊತೆಗೆ ಶಿವಮೊಗ್ಗ ನಗರದ ವಿವಿಧ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮೋಟಾರ್ ಬೈಕ್ ಹಾಗೂ ಆಟೋ ರಿಕ್ಷಾಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ.

ಆರೋಪಿಯು ನೀಡಿದ ಮಾಹಿತಿಯಂತೆ ಶಿವಮೊಗ್ಗ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 21 ಪ್ರಕರಣಗಳು ಹಾಗೂ ನಗರದಲ್ಲಿ ದಾಖಲಾಗಿದ್ದ 3 ಪ್ರಕರಣಗಳು ಪತ್ತೆಯಾಗಿದ್ದು ಆ ಪೈಕಿ 6.5 ಲಕ್ಷ ಬೆಲೆ ಬಾಳುವ 11 ಆಟೋ ರಿಕ್ಷಾಗಳು, ವಿವಿಧ ಕಂಪನಿಯ 4 ಲಕ್ಷ ಬೆಲೆ ಬಾಳುವ 8 ಮೋಟಾರ್ ಬೈಕ್‍ಗಳು ಹಾಗೂ ನಗರ ಠಾಣೆಯಲ್ಲಿ ದಾಖಲಾಗಿದ್ದ 7.5 ಲಕ್ಷ ಬೆಲೆ ಬಾಳುವ 2 ಬೈಕ್ ಹಾಗೂ ಒಂದು ಸ್ಕಾರ್ಪಿಯೋ ಜೀಪ್ ಸೇರಿದಂತೆ ಒಟ್ಟು 18 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಆರೋಪಿ ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಡಿ.ವೈ.ಎಸ್.ಪಿ ಸದಾನಂದ ತಿಪ್ಪಣ್ಣನವರ್, ಪಿ.ಎಸ್.ಐ. ಶಬ್ಬೀರ್ ಹುಸೇನ್, ಎ.ಎಸ್.ಐ ತಿಮ್ಮಪ್ಪ, ಸಿಬ್ಬಂದಿಗಳಾದ ಮಂಜುನಾಥ್ ಗೌಡ, ರಘು, ಶಶಿಧರ್, ಗಿರೀಶ್, ಸಿದ್ದೇಶ್, ಹರೀಶ್, ರಂಗಸ್ವಾಮಿ ಅವರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: