ಮೈಸೂರು

ಸಾಲಮನ್ನಾ ವಿಳಂಬ: ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ

ಮೈಸೂರು (ಜೂ.18): ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಮೇ 30ರಂದು ರೈತರ ಸಾಲಮನ್ನಾ ವಿಚಾರವಾಗಿ ಸಭೆಯನ್ನು ಕರೆದು ರೈತ ಸಂಘಟನೆಯ ಅಭಿಪ್ರಾಯ ಕೇಳಿದ ನಂತರ 15 ದಿನಗಳ ಕಾಲಾವಕಾಶವನ್ನು ಕೋರಿದ್ದರು. ಆದರೆ ಈ ಗಡುವು ಮುಗಿದಿದ್ದರೂ ಇಲ್ಲಿಯವರೆಗೆ ಸಾಲಮನ್ನಾ ಬಗ್ಗೆ ವಿಳಂಬ ಧೋರಣೆ ತೋರುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಇದರ ಭಾಗವಾಗಿ ಇಂದು ಮೈಸೂರಿನಲ್ಲಿಯೂ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ವಿಳಂಬ ಧೋರಣೆ ಹಿನ್ನಲೆಲ್ಲಿ ಸರ್ಕಾರ ರೈತರ ಸಾಲ ಮನ್ನಾ ವಿಳಂಬ ನೀತಿ ಅನುಸರಿಸುತ್ತಿದೆ. ಮುಖ್ಯಮಂತ್ರಿಗಳು ರೈತರಿಗೆ ಸಾಲ ಮನ್ನಾ ಭರವಸೆ ನೀಡಿ ಸಾಲ ಮನ್ನಾ ಮಾಡದೆ ವಚನ ಭ್ರಷ್ಟರಾಗಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ ಎಂದು ಆಗ್ರಹಿಸಿದರು.

ರೈತ ಕುಟುಂಬದವರು ಆಭರಣಗಳ ಮೇಲೆ ಪಡೆದಿರುವ ಸಾಲವನ್ನು ಸಹ ಮನ್ನಾ ವ್ಯಾಪ್ತಿಗೆ ತರಬೇಕು. ಕೃಷಿ ಅಭಿವೃದ್ಧಿಗೆ ಪೂರಕವಾಗಿರುವ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಮಧ್ಯಮ ಮತ್ತು ದೀರ್ಘಾವಧಿ ಸಾಲಗಳನ್ನು ಕೂಡ ಮನ್ನಾ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹೆಚ್.ಸಿ.ಲೋಕೇಶ್ ರಾಜೇ ಅರಸ್, ಹೊಸೂರ್ ಕುಮಾರ್, ಸರಗೂರು ನಟರಾಜು, ಪಿ.ಮರಂಕಯ್ಯ, ವಿದ್ಯಾಸಾಗರ್, ಬೆಂಕಿಪುರ ಚಿಕ್ಕಣ್ಣ, ಶಿವಣ್ಣ ಶೆಟ್ಟರು, ಕುಮಾರಸ್ವಾಮಿ, ನೇತ್ರಾವತಿ ಅವರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: