ಪ್ರಮುಖ ಸುದ್ದಿ

ಮಹಾಮಳೆಗೆ ಕೊಡಗಿನಲ್ಲಿ 14 ಕೋಟಿ ರೂ.ಗಳಷ್ಟು ನಷ್ಟ : ಜಿಲ್ಲಾಡಳಿತದಿಂದ ವರದಿ

ರಾಜ್ಯ(ಮಡಿಕೇರಿ) ಜೂ.18 :-  ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ಸುಮಾರು 14 ಕೋಟಿ ರೂ.ಗಳಷ್ಟು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿರುವುದಾಗಿ ಜಿಲ್ಲಾಡಳಿತ ಅಂದಾಜು ಮಾಡಿದೆ.

ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾಹಿತಿ ನೀಡಿದರು.

ಗಾಳಿ ಮಳೆಯಿಂದಾಗಿ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 69 ಲಕ್ಷ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 37.15 ಲಕ್ಷ,  ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 627.40 ಲಕ್ಷ, ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ 575.25 ಲಕ್ಷ ಹಾಗೂ ಚೆಸ್ಕಾಂ ವ್ಯಾಪ್ತಿಯಲ್ಲಿ 84.74 ಲಕ್ಷ ಸೇರಿದಂತೆ ಒಟ್ಟು 1393.55ಲಕ್ಷ ರೂ. ನಷ್ಟವಾಗಿರುವುದಾಗಿ ವಿವರಿಸಿದರು. ಜಿಲ್ಲೆಯಲ್ಲಿ ಜೂನ್ ತಿಂಗಳವರೆಗೆ 731.53 ಮಿ.ಮೀ.ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈ ಬಾರಿ 1066.95ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಸುಮಾರು 364.72 ಮಿ.ಮೀ ಅಧಿಕ ಮಳೆಯಾಗಿದೆ. ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 465.21ಮಿ.ಮೀ ಮಳೆಯಾಗಿತ್ತು ಎಂದು ಮಾಹಿತಿ ನೀಡಿದರು.

ಆದರೆ ಜಿಲ್ಲಾಡಳಿತ ಮಾಡಿರುವ ನಷ್ಟ ಅಂದಾಜಿನ ಬಗ್ಗೆ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್ ಆಕ್ಷೇಪ ವ್ಯಕ್ತಪಡಿಸಿದರು. ಚೆಸ್ಕಾಂ ಅಧಿಕಾರಿಗಳು ಸಮರ್ಪಕವಾಗಿ ನಷ್ಟದ ಅಂದಾಜು ಮಾಡಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಗ್ರಾಮಗಳಲ್ಲಿ ತಲಾ 15-20 ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಕಳೆದ 15 ದಿನಗಳಿಂದ ಹಲವು ಗ್ರಾಮಗಳು ಕಾರ್ಗತ್ತಲಲ್ಲಿ ಮುಳುಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಚೆಸ್ಕಾಂ ಕಾರ್ಯಪಾಲಕ ಅಭಿಯಂತರರು ಜಿಲ್ಲೆಯಲ್ಲಿ 1374 ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದು, ಈಗಾಗಲೇ 1110 ಕಂಬಗಳನ್ನು ಮತ್ತೆ ನೆಡಲಾಗಿದೆ. 93 ಟ್ರಾನ್ಸ್‍ಫಾರ್ಮರ್ ಪೈಕಿ 80ನ್ನು ಮರು ಸ್ಥಾಪಿಸಲಾಗಿದೆ. ಮುಂದಿನ ಮೂರು ದಿನಗಳಲ್ಲಿ ಜಿಲ್ಲೆಯ ಬಹುತೇಕ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದರು.

ಆದರೆ ಅಧಿಕಾರಿಯ ಈ ಉತ್ತರಕ್ಕೆ ಪ್ರತಿಕ್ರಿಯಿಸಿದ ಶಾಸಕರುಗಳು, ಸಭೆಗೆ ಸುಳ್ಳು ಮಾಹಿತಿ ನೀಡಬೇಡಿ. ನಿಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ಇರುವ ಸಿಬ್ಬಂದಿಗಳಲ್ಲಿ 3 ಅಲ್ಲ 5 ದಿನಗಳಾದರೂ ನಿಮಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶಗಳ ವಸ್ತುಸ್ಥಿತಿಯ ಬಗ್ಗೆ ನಿಮಗೆ ಅರಿವೇ ಇಲ್ಲ. ನಿಮ್ಮ ಕೆಳ ಹಂತದ ಸಿಬ್ಬಂದಿಗಳು ಸಮರ್ಪಕವಾದ ಮಾಹಿತಿ ನೀಡುತ್ತಿಲ್ಲ. ಕೆಲವು ಸಿಬ್ಬಂದಿಗಳಂತೂ ದೂರವಾಣಿ ಕರೆಯನ್ನೇ ಸ್ವೀಕರಿಸುತ್ತಿಲ್ಲ. ಅವರು ಕೆಲಸ ಮಾಡುವುದನ್ನು ಬಿಟ್ಟು ದಿನವಿಡೀ ಬೇರೆ ಉದ್ದೇಶಗಳಿಗಾಗಿ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಂದಾಯ ಇಲಾಖೆ ಅಧಿಕಾರಿಗಳು ಕೂಡಾ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವು ಗ್ರಾಮಗಳಲ್ಲಿ ಭಾರೀ ನಷ್ಟ ಉಂಟಾಗಿದ್ದರೂ, ಇನ್ನೂ ಸ್ಥಳ ಪರಿಶೀಲನೆಯನ್ನೇ ನಡೆಸಿಲ್ಲ. ಕೆಲವು ಗ್ರಾಮಗಳಲ್ಲಿ ಕೃಷಿ ಭೂಮಿ ಜಲಾವೃತಗೊಂಡ ಪರಿಣಾಮ ಮರಳು ತುಂಬಿ ಈ ವರ್ಷ ಕೃಷಿ ಮಾಡಲಾಗದ ಪರಿಸ್ಥಿತಿ ಇದೆ. ವೀರಾಜಪೇಟೆ ತಾಲೂಕಿನ ವಿ.ಬಾಡಗ ಗ್ರಾಮದಲ್ಲಿ ಸುಮಾರು 3ಕಿ.ಮೀ ವ್ಯಾಪ್ತಿಯಲ್ಲಿ ಭೂ ಕುಸಿತ ಉಂಟಾಗಿದ್ದು, ಗ್ರಾಮಕ್ಕೆ ತೆರಳಲು ರಸ್ತೆಯೇ ಇಲ್ಲ. ಕೆಲವು ಕಡೆಗಳಲ್ಲಿ ಸಂಪೂರ್ಣ ಮನೆ ಕುಸಿದಿದ್ದರೂ, ಭಾಗಶಃ ಹಾನಿ ಎಂದು ವರದಿ ನೀಡಿದ್ದಾರೆ. ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ  ನಡೆಸಿದ್ದರೂ, ಕಂದಾಯ ಪರಿವೀಕ್ಷಕರುಗಳು ಇನ್ನೂ ಸ್ಥಳಕ್ಕೆ ತೆರಳಿಲ್ಲ ಎಂದು ಇಲಾಖೆಯ ಕಾರ್ಯವೈಖರಿಯ ಬಗ್ಗೆ ಸಚಿವರೆದುರು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನು ಆಲಿಸಿದ ಸಚಿವ ದೇಶಪಾಂಡೆ ಅವರು, ಜಿಲ್ಲಾಧಿಕಾರಿಗಳು ಮಂಡಿಸಿದ ವರದಿಯನ್ನು ಅರ್ಧದಲ್ಲೇ ಕೈಬಿಟ್ಟು ಹೊಸದಾಗಿ ಸಮೀಕ್ಷೆ ನಡೆಸಿ ವಾರದೊಳಗೆ ವರದಿ ನೀಡುವಂತೆ ಸೂಚಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: