ಪ್ರಮುಖ ಸುದ್ದಿ

ಸರ್ಕಾರ ರೈತಾಪಿ ವರ್ಗಕ್ಕೆ ನೀಡಿದ ಸವಲತ್ತು ತಿಳಿಸಲು ಅಧಿಕಾರಿಗಳು ಮುಂದಾಗಿ : ಶಾಸಕ ಕೆ.ಎಸ್.ಲಿಂಗೇಶ್

ರಾಜ್ಯ(ಹಾಸನ)ಜೂ.19:-  ಸರ್ಕಾರ ರೈತಾಪಿ ವರ್ಗಕ್ಕೆ ಹತ್ತು ಹಲವು ಸವಲತ್ತು ನೀಡಿದ್ದು, ಅಧಿಕಾರಿಗಳು ಪ್ರತಿಯೊಬ್ಬ ರೈತರಿಗೂ ಅದನ್ನು ತಿಳಿಸಲು ಮುಂದಾಗಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು.

ಬೇಲೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆ ಹಮ್ಮಿಕೊಂಡ ಕಸಬಾ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದೇಶಕ್ಕೆ ಅನ್ನ ನೀಡುವ ಕೃಷಿಕರು ಅತಿವೃಷ್ಟಿ,ಅನಾವೃಷ್ಟಿಯಿಂದ ಕೃಷಿಯನ್ನು ನಿರ್ಲಕ್ಷ್ಯ ಮಾಡಿ ಪಟ್ಟಣದ ಕಡೆ ವಲಸೆ ಹೋಗುತ್ತಿದ್ದಾರೆ, ಇದ್ದರಿಂದ ಕೃಷಿ ಕಾಯಕ ಮಾಡುವವರ ಸಂಖ್ಯೆ ಇಳಿಮುಖವಾಗುತ್ತಿದೆ, ವಿಶೇಷವಾಗಿ ಕೃಷಿ ಇಲಾಖೆ,ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತಾಪಿ ವರ್ಗಕ್ಕೆ ಧೈರ್ಯ ತುಂಬುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂಬ ದೂರು ಬಂದಿದೆ. ಕೃಷಿ ಬಗ್ಗೆ ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಮತ್ತು ಅಧುನಿಕ ಬೇಸಾಯ ಪದ್ಧತಿಯ ಬಗ್ಗೆ ಅರಿವು ಮೂಡಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು. ಕೃಷಿಗೆ ವಿದ್ಯಾವಂತರನ್ನು ಆಕರ್ಷಣೆ ಮಾಡಲು ಸರ್ಕಾರ ಈಗಾಗಲೇ ಹಲವು ಯೋಜನೆ ರೂಪಿಸುತ್ತಿದೆ ಎಂದರು.

ಬೇಲೂರು ತಾಲೂಕಿನ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ  ವ್ಯಾಪಕ ದೂರು ಬಂದಿದ್ದು, ಈ ನಿಟ್ಟಿನಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಮೊದಲು ಪ್ರಾಥಮಿಕ ಚಿಕಿತ್ಸೆ ನೀಡುವ ಕಾರ್ಯಕ್ಕೆ ಸದ್ಯ ಮುಂದಾಗಿದ್ದು, ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಬೇಕು, ವಿಶೇಷವಾಗಿ ರೈತಾಪಿ ವರ್ಗ ಹೆಚ್ಚು ಬರುವ ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದರೆ ನಾನು ಸಹಿಸುವುದಿಲ್ಲ ಎಂದರು. ಸತತ ನಾಲ್ಕು ವರ್ಷದ ಬರಗಾಲದಿಂದ ಅಂತರ್ಜಲ ಮಟ್ಟ ತೀವ್ರ ಕುಸಿತದಿಂದ ಭೂಮಿಯಲ್ಲಿ ನೀರಿಲ್ಲ, ಇದ್ದರಿಂದ ಬೇಸಾಯ ಸ್ಥಿತಿ ಚಿಂತಾಜನಕವಾಗಿದೆ, ರೈತರು ಕೇವಲ ಮುಸುಕಿನ ಜೋಳದ ಬೆಳೆಗೆ ಆದ್ಯತೆ ನೀಡದೆ, ತಮ್ಮ ಮನೆಗೆ ಅಗತ್ಯವಾದ ಆಹಾರ ಧಾನ್ಯಗಳನ್ನು ಹಾಗೂ ತರಕಾರಿಗಳನ್ನು ಬೆಳೆಯಲು ಮುಂದಾಬೇಕು, ಇಸ್ರೇಲ್ ಮಾದರಿಯಲ್ಲಿ ಕೃಷಿ ಪದ್ಧತಿ, ಆಧುನಿಕ ಬೇಸಾಯ ಪದ್ಧತಿಯ ಕಡೆ ರೈತರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷ ಪಿ.ಎಸ್.ಹರೀಶ್. ಪುರಸಭಾ ಅಧ್ಯಕ್ಷೆ ಭಾರತಿ, ಎಪಿಎಂಸಿ ಅಧ್ಯಕ್ಷ ವಿಷ್ಣುಕುಮಾರ್, ಜಿ,ಪಂ ಸದಸ್ಯರಾದ ಸೈಯದ್‍ತೌಫಿಕ್, ಲತಾಮಂಜೇಶ್ವರಿ, ತಾ,ಪಂ ಸ್ಥಾಯಿ ಸಮಿತಿ ಸದಸ್ಯರಾದ ಸೋಮಯ್ಯ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: