ಪ್ರಮುಖ ಸುದ್ದಿ

ಕುಖ್ಯಾತ ಸರಗಳ್ಳ ಅಚ್ಚುತ್ ಕುಮಾರ್ ಗಣಿಗೆ ಪಶ್ಚಿಮ ವಿಭಾಗದ ಪೊಲೀಸರಿಂದ ಗುಂಡು

ರಾಜ್ಯ(ಬೆಂಗಳೂರು)ಜೂ.19:- ಮೂತ್ರ ವಿಸರ್ಜನೆ ನೆಪ ಮಾಡಿ ಕತ್ತಲಲ್ಲಿ ತಪ್ಪಿಸಿಕೊಂಡು ಬೆನ್ನಟ್ಟಿ ಹೋದಾಗ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆಗೆ ಮುಂದಾಗಿ ಕಲ್ಲುಗಳಿಂದ ಹೊಡೆದು ಪರಾರಿಯಾಗಲು ಯತ್ನಿಸಿದ ಕುಖ್ಯಾತ ಸರಗಳ್ಳ ಅಚ್ಚುತ್ ಕುಮಾರ್ ಗಣಿ ಮೇಲೆ ಪಶ್ಚಿಮ ವಿಭಾಗದ ಪೊಲೀಸರು ಗುಂಡು ಹಾರಿಸಿದ್ದಾರೆ.

ಕುಖ್ಯಾತ ಸರಗಳ್ಳ ಅಚ್ಚುತ್ ಕುಮಾರ್ ಗಣಿ ಕಾಲಿಗೆ ಗುಂಡೇಟು ತಗುಲಿದೆ. ಬನಶಂಕರಿ 6ನೇ ಹಂತದ ಬಳಿ ಇಂದು ಮುಂಜಾನೆ ಕಾರ್ಯಾಚರಣೆ ನಡೆಸಿದ ವೇಳೆ ಮೂತ್ರ ವಿಸರ್ಜನೆ ನೆಪ ಮಾಡಿ ತಪ್ಪಿಸಿಕೊಳ್ಳಲು ಹೋಗಿ ಗುಂಡೇಟು ತಿಂದಿದ್ದಾನೆ.

ನಗರದಲ್ಲಿ 70 ಕ್ಕೂ ಹೆಚ್ಚು ಸರಗಳ್ಳತನದಲ್ಲಿ ಭಾಗಿಯಾಗಿದ್ದ ಈತ ಕುಂಬಳಗೋಡುವಿನ ಕಣ್‌ಮಿಣ್‌ಕೆಯ ಅಚ್ಚುತ್ ಕುಮಾರ್ ಗಣಿ (31) ಎಂದು ಹೇಳಲಾಗಿದ್ದು, ಗಾಯಗೊಂಡ ಈತನನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ ಪ್ರಾಣಪಾಯದಿಂದ ಪಾರಾಗಿದ್ದಾನೆ. ಪಶ್ಚಿಮ ವಿಭಾಗದಲ್ಲಿ ಹೆಚ್ಚುತ್ತಿರುವ ಸರಗಳ್ಳತನದ ಹಿನ್ನೆಲೆಯಲ್ಲಿ ಜ್ಞಾನ ಭಾರತಿ ಹಾಗೂ ಕೆಂಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗಸ್ತು ಹೆಚ್ಚಿಸಿ ನಿನ್ನೆ ರಾತ್ರಿ 8ರ ವೇಳೆ ಕಾರ್ಯಚರಣೆ ನಡೆಸುತ್ತಿದ್ದಾಗ ಜ್ಞಾನಭಾರತಿ ಸಮೀಪ ಪಲ್ಸರ್ ಬೈಕ್‌ನಲ್ಲಿ ಅನುಮಾಸ್ಪಾದವಾಗಿ ಹೋಗುತ್ತಿದ್ದ ಗಣಿಯನ್ನು ಮುಖ್ಯಪೇದೆ ಚಂದ್ರ ಕುಮಾರ್ ಚೀತಾ ಬೈಕ್‌ನಲ್ಲಿ ಬೆನ್ನಟ್ಟಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಗಣಿಯ ಬೈಕ್‌ಗೆ ಹಿಂದಿನಿಂದ ಪೊಲೀಸರ ಬೈಕ್ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಆತನನ್ನು ಹಿಡಿಯಲೂ ಚಂದ್ರ ಕುಮಾರ್ ಹೋದಾಗ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ ತಕ್ಷಣವೇ ಸ್ಥಳಕ್ಕೆ ಬಂದ ಹೆಚ್ಚಿನ ಸಿಬ್ಬಂದಿ ಬೆನ್ನಟ್ಟಿ ಆತನನ್ನು ಹಿಡಿದಿದ್ದಾರೆ. ವಶಕ್ಕೆ ಪಡೆದುಕೊಂಡ ಗಣಿಯನ್ನು ಜ್ಞಾನಭಾರತಿ ಪೊಲೀಸ್ ಠಾಣೆಗೆ ಕರೆತಂದು ಅಲ್ಲಿಂದ ಹೆಚ್ಚಿನ ವಿಚಾರಣೆಗಾಗಿ ಕುಂಬಳಗೋಡು ಕಡೆಗೆ ಮುಂಜಾನೆ 2.30ರ ವೇಳೆ ಕರೆದುಕೊಂಡು ಹೋಗುತ್ತಿದ್ದಾಗ ಕೆಂಗೇರಿ ಸ್ಯಾಟ್ ಲೈಟ್‌ಕ್ಲಬ್ ಬಳಿ ಮೂತ್ರ ವಿಸರ್ಜನೆ ನೆಪ್ಪವೊಡ್ಡಿ ಪೊಲೀಸ್ ವ್ಯಾನ್‌ನಿಂದ ಕೆಳಗಿಳಿದಿದ್ದಾನೆ. ಪೊಲೀಸ್ ಪೇದೆಯೊಬ್ಬರು ಹಿಂದೆ ಬಂದರಾದರೂ ಕತ್ತಲಲ್ಲಿ ಸಮಯ ಸಾಧಿಸಿ ಓಡಿ ತಪ್ಪಿಸಿಕೊಂಡಿದ್ದಾನೆ. ಕೂಡಲೇ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಕರೆಸಿ ಶೋಧ ನಡೆಸಿದಾಗ ಬನಶಂಕರಿ 6ನೇ ಹಂತದ ಬಳಿ ಆತನಿರುವುದು ಪತ್ತೆಯಾಗಿ ಕಾರ್ಯಾಚರಣೆ ನಡೆಸಲಾಗಿದೆ. ಗಣಿಯನ್ನು ಕಂಡ ಕೂಡಲೇ ಬೆನ್ನಟ್ಟಿ ಹಿಡಿಯಲು ಹೋದ ಎಎಸ್‌ಐ ವೀರಭದ್ರಯ್ಯ ಅವರ ಮೇಲೆ ಮತ್ತೆ ಮಾರಾಣಾಂತಿಕ ಹಲ್ಲೆಗೆ ಯತ್ನಿಸಿದ್ದಾನೆ. ಎಚ್ಚರಿಕೆಯ ಬಳಿಕವೂ ಕಲ್ಲಿನಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಸ್ವಯಂ ರಕ್ಷಣೆಗಾಗಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರವೀಣ್ ಯಲಿಗಾರ್ ಅವರು ರಿವಾಲ್ವರ್ ನಿಂದ ಗುಂಡು ಹಾರಿಸಿದ್ದು ಬಲಗಾಲಿಗೆ ಗುಂಡೇಟು ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಸುತ್ತುವರೆದ ಪೊಲೀಸರು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಯು ನಗರದ ಹಲವೆಡೆ ಬೈಕ್ ನಲ್ಲಿ ಸಂಚರಿಸುತ್ತ ಒಂಟಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದು, ಈತನ ವಿರುದ್ಧ 70ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣವರ್ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: