
ಕರ್ನಾಟಕಪ್ರಮುಖ ಸುದ್ದಿ
ಕೇಂದ್ರದ ಮುಂದೆ ಸಾಲ ಮನ್ನಾ ನೆರವು ಕೇಳುವುದು ಸರಿಯಲ್ಲ: ಯಡಿಯೂರಪ್ಪ
ಬೆಂಗಳೂರು (ಜೂನ್ 19): ರಾಜ್ಯದ ರೈತರ ಸಾಲಮನ್ನಾಗೆ ಕೇಂದ್ರದಿಂದ ಶೇ.50ರಷ್ಟು ನೆರವು ಸಿಗುವುದು ಕಷ್ಟ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ಮಾಧ್ಯಮ ಪ್ರತಿನಿಧಿಗಳೊಮದಿಗೆ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಕೇಂದ್ರದ ಮುಂದೆ ಅಂತಹದ್ದೊಂದು ಬೇಡಿಕೆ ಇಟ್ಟಿರುವುದು ಸರಿಯಲ್ಲ. ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ಸರ್ಕಾರಗಳು ಕೇಂದ್ರದ ನೆರವು ಪಡೆಯದೇ ಸಾಲಮನ್ನಾ ಮಾಡಿವೆ. ಕುಮಾರಸ್ವಾಮಿ ಕೇಂದ್ರದ ಮೇಲೆ ಹೊಣೆಗಾರಿಕೆ ಹಾಕದೇ ರಾಜ್ಯದ ಹಣಕಾಸು ಇತಿಮಿತಿಯನ್ನು ತಿಳಿದು ಸಾಲ ಮನ್ನಾ ಪ್ರಕಟಿಸಬೇಕಿತ್ತು ಎಂದರು.
ಮುಖ್ಯಮಂತ್ರಿಯವರು ಬಜೆಟ್ನಲ್ಲಿ ಸಾಲಮನ್ನಾ ಪ್ರಕಟಿಸದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದರು. ಮುಖ್ಯಮಂತ್ರಿಯಾಗಿ 24 ಗಂಟೆಯೊಳಗೆ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಅವರು ಈಗ ದಿನಕ್ಕೊಂದು ಕಾರಣ ನೀಡುತ್ತಿದ್ದಾರೆ ಎಂದು ಟೀಕಿಸಿದರು. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ಕೇಳಬೇಕು ಎಂದು ಅಪ್ಪ-ಮಕ್ಕಳು ಹೇಳುತ್ತಿದ್ದಾರೆ. ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಸಮ್ಮತಿಸಿದರೆ ಮಾತ್ರ ಮುಖ್ಯಮಂತ್ರಿ ಆಗುವುದಾಗಿ ಕರಾರು ಹಾಕಬೇಕಿತ್ತು. ಆದರೆ, ಕುರ್ಚಿ ಆಸೆಯಿಂದ ಗಡಿಬಿಡಿಯಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದಾರೆ ಎಂದು ಟೀಕಿಸಿದರು.
ಬಜೆಟ್ ಮಂಡನೆ ವಿಚಾರದಲ್ಲೂ ಎರಡೂ ಪಕ್ಷಗಳ ಮಧ್ಯೆ ಕಚ್ಚಾಟ ನಡೆಯುತ್ತಿದೆ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೊಸ ಬಜೆಟ್ ಬೇಡ ಎಂದು ಹೇಳಿದರೆ ಉಪಮುಖ್ಯಮಂತ್ರಿ ಪರಮೇಶ್ವರ ಅವರು ಹೊಸ ಬಜೆಟ್ ಮಂಡನೆ ಆಗಲಿ ಎನ್ನುತ್ತಿದ್ದಾರೆ. ಇದರಿಂದ ರಾಜ್ಯದ ಜನ ರೋಸಿ ಹೋಗಿದ್ದಾರೆ. ರೈತರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು.
ಬಿಎಸ್ವೈಗೆ ಡಿಕೆಶಿ ತಿರುಗೇಟು :
ರೈತರ ಸಾಲ ಮನ್ನಾ ವಿಚಾರವಾಗಿ ಪ್ರತಿಭಟನೆ ಮಾಡುವುದಾಗಿ ಹೇಳಿರುವ ಯಡಿಯೂರಪ್ಪ ಅವರಿಗೆ ತಾಳ್ಮೆ ಇರಬೇಕು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಮೂರು ದಿನ ಮುಖ್ಯಮಂತ್ರಿ ಆಗಿದ್ದಾಗಲೇ ಆ ಕೆಲಸ ಮಾಡಬೇಕಿತ್ತು. ಆಗ ಏಕೆ ಸಾಧ್ಯವಾಗಲಿಲ್ಲ ಎಂದು ಡಿಕೆಶಿ ಲೇವಡಿ ಮಾಡಿದ್ದಾರೆ. (ಎನ್.ಬಿ)