ಮೈಸೂರು

ಕೆಸರಿನ ಗುಂಡಿಯಂತಾದ ರಸ್ತೆಗಳು : ನಿವಾಸಿಗಳ ಆಕ್ರೋಶ

ಮೈಸೂರು, ಜೂ.19:- ಪಿರಿಯಾಪಟ್ಟಣ ಪುರಸಭೆ ವ್ಯಾಪ್ತಿಗೆ ಒಳಪಡುವ ಗಾಂಧಿನಗರ ಬಡಾವಣೆಯಲ್ಲಿನ ರಸ್ತೆಗಳು ಕೆಸರಿನ ಗುಂಡಿಯಂತಾಗಿದ್ದು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಪೊಲೀಸ್ ವಸತಿ ಗೃಹಗಳ ಹಿಂಭಾಗದ ಪ್ರದೇಶದಲ್ಲಿರುವ ಗಾಂಧಿನಗರ ಬಡಾವಣೆಯಲ್ಲಿ ಕಳೆದ 10ವರ್ಷಗಳ ಹಿಂದೆ ಮನೆಗಳನ್ನು ನಿರ್ಮಿಸಿದ್ದು ಈವರೆಗೂ ಸೂಕ್ತ ರಸ್ತೆಗಳ ವ್ಯವಸ್ಥೆಯಿಲ್ಲದೆ ಮಳೆಗಾಲದಲ್ಲಿ ಪ್ರತಿನಿತ್ಯವೂ ವಿದ್ಯಾರ್ಥಿಗಳು ಮಹಿಳೆಯರು ಸೇರಿದಂತೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಪುರಸಭೆಯ ವ್ಯಾಪ್ತಿಗೆ ಈ ಬಡಾವಣೆಯು ಸೇರ್ಪಟ್ಟಿದ್ದರೂ ಇಲ್ಲಿ ಸೂಕ್ತ ಚರಂಡಿ, ರಸ್ತೆ ಮತ್ತಿತರ ಮೂಲಭೂತ ಸೌಲಭ್ಯಗಳು ದೊರಕಿಲ್ಲ. ಈ ಬಗ್ಗೆ ಹಲವು ಬಾರಿ ಪುರಸಭೆ ಅಧಿಕಾರಿಗಳು ಮತ್ತು ವಾರ್ಡ್‍ನ ಜನಪ್ರತಿನಿಧಿಗಳಿಗೆ ದೂರು ನೀಡಿದ್ದರೂ ಸಹ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲು ನಿರ್ಲಕ್ಷ್ಯ ತೋರುತ್ತಿರುವುದು ಕಂಡು ಬರುತ್ತಿದೆ.

ಬಿ.ಎಂ.ರಸ್ತೆಯಿಂದ ಪಾರೆಕೊಪ್ಪಲು ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯಿದ್ದು ಈ ರಸ್ತೆ ಸಹ ಮೆಟಲಿಂಗ್ ಮತ್ತು ಡಾಂಬರೀಕರಣ ಕಾಣದೆ ರಸ್ತೆಯಲ್ಲಿ ಸಂಚರಿಸುವುದೇ ಒಂದು ಸಾಹಸದ ಕೆಲಸವಾಗಿದೆ. ಇನ್ನಾದರೂ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಗಾಂಧಿನಗರ ಬಡಾವಣೆಗೆ ಉತ್ತಮ ರಸ್ತೆ ಮತ್ತು ಚರಂಡಿ ಶೀಘ್ರವಾಗಿ ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: