ಮೈಸೂರು

ಕೌಶಲಾಧಾರಿತ ತರಬೇತಿ ಯೋಜನೆ ಸದುಪಯೋಗಪಡಿಸಿಕೊಳ್ಳಿ : ಪುಷ್ಪಾ ಅಮರನಾಥ ಕರೆ

ಮಹಿಳೆಯರು ಸರ್ಕಾರ ಜಾರಿಗೊಳಿಸಿರುವ ಕೌಶಲಾಧಾರಿತ ತರಬೇತಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾ ಅಮರನಾಥ್ ಕರೆ ನೀಡಿದರು.

ಮೈಸೂರಿನ ವಿ-ಕೇರ್ ಸಂಸ್ಥೆಯು ಬೆಳವಾಡಿಯ ಪೌರಕಾರ್ಮಿಕರ ಕಾಲೋನಿಯಲ್ಲಿ ಏರ್ಪಡಿಸಿದ್ದ ಸಮುದಾಯ ಹಬ್ಬ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಪುಷ್ಪ ಅಮರನಾಥ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು ಮಹಿಳೆಯರು ಸ್ವ ಉದ್ಯೋಗ ಕೈಗೊಳ್ಳಲು ಮುಂದಾಗಬೇಕು. ಪೌರಕಾರ್ಮಿಕ ಮಹಿಳೆಯೋರ್ವರಿಂದ ದಸರಾ ಮಹೋತ್ಸವ ಉದ್ಘಾಟನೆ ಮಾಡಿಸಬೇಕು ಎನ್ನುವ ಯೋಚನೆಯಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಪಂಚಾಯತ್ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬೆಳವಾಡಿ ಗ್ರಾಮದ ಪೌರಕಾರ್ಮಿಕರ ಕಾಲೋನಿಗೆ ರಸ್ತೆ, ಶೌಚಾಲಯ, ಕುಡಿಯುವ ನೀರು ಮುಂತಾದ ಸೌಲಭ್ಯವನ್ನು ಕಲ್ಪಿಸಲಾಗುವುದು. ಒಂದು ವರ್ಷದೊಳಗೆ ಮೂಲಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗವುದು ಎಂದರು.

ವಿ-ಕೇರ್ ಸಂಸ್ಥೆಯ ಸಂಸ್ಥಾಪಕಿ ಪ್ರೊ.ಕುಮುದಿನಿ ಅಚ್ಚಿ ಮಾತನಾಡಿ ಮಹಿಳೆಯರ ಸುರಕ್ಷತೆಗೆ ಕಾವಲು ಸಮಿತಿ ರಚಿಸಲಾಗಿದೆ. ಕಾಲೊನಿಯ 18 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು ಅವರನ್ನು ಮರಳಿ ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಾಯೋಜಕತ್ವದಡಿ 20 ಮಕ್ಕಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಲಾತಂಡವನ್ನು ರಚಿಸಿ ಜನಪದ ಕಲೆ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬೋದಿದತ್ತ ಬಂತೇಜಿ, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಕಾಲೊನಿಯ ಯುವಕ ಮಹದೇವ್, ನಿರ್ದೇಶಕ ರಘು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: