ಮೈಸೂರು

ನಾಳೆ ಡಾ.ಪ್ರಭುಶಂಕರ ಸ್ಮಾರಕ ಉಪನ್ಯಾಸ ಮಾಲೆಯ ಉದ್ಘಾಟನೆ

ಮೈಸೂರು,ಜೂ.19 : ಮೈಸೂರು ವಿಶ್ವವಿದ್ಯಾನಿಲಯದ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿರುವ ಡಾ.ಪ್ರಭುಶಂಕರ ಸ್ಮಾರಕ ಉಪನ್ಯಾಸ ಮಾಲೆಯ ಉದ್ಘಾಟನಾ ಸಮಾರಂಭವನ್ನು ಜೂ.20ರ ಬೆಳಗ್ಗೆ 11.30ಕ್ಕೆ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಆಯೋಜಿಸಿದೆ ಎಂದು ಸಂಘದ ಅಧ್ಯಕ್ಷ ಡಾ.ವಸಂತ ಕುಮಾರ್ ತಿಮಕಾಪುರ ತಿಳಿಸಿದರು.

ಶತಮಾನೋತ್ಸವ ಸುದೀರ್ಘ ಇತಿಹಾಸ ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯವು ಕೋಟ್ಯಾಂತರ ಜನ ಅಪ್ರತಿಮ ಪ್ರತಿಭೆಗಳನ್ನು ನಾಡಿಗೆ ನೀಡಿದ್ದು ದೇಶ ವಿದೇಶಗಳಲ್ಲಿಯೂ ವಿವಿಯ ವಿದ್ಯಾರ್ಥಿಗಳು ಪ್ರತಿಭೆ ಮೆರೆಯುತ್ತಿದ್ದು, ಅಂತಹ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ಉದ್ಘಾಟಿಸುವರು, ಡಾ.ವಸಂತ ಕುಮಾರ್ ತಿಮಕಾಪುರ ಅಧ್ಯಕ್ಷತೆ ವಹಿಸುವರು. ‘ಕುವೆಂಪು ಅವರ ಕ್ರಾಂತಿಕಾರಕ ವಿಚಾರಗಳು’ ವಿಷಯವಾಗಿ ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನದ ನಿರ್ದೇಶಕ ಡಾ.ಕೆ.ಸಿ.ಶಿವಾರೆಡ್ಡಿ ಉಪನ್ಯಾಸ ನೀಡುವರು. ಪ್ರೊ.ನೀಲಗಿರಿ ಎಂ.ತಳವಾರ್, ವಿವಿಯ ಕುಲಪತಿ ಪ್ರೊ.ಟಿ.ಕೆ.ಉಮೇಶ್ ಇರುವರು ಎಂದರು.

ಮೈಸೂರು ವಿವಿಗೆ ಕಳೆದ ಒಂದೂ ಕಾಲು ವರ್ಷದಿಂದ ಕುಲಪತಿ ನೇಮಕ ಮಾಡದೆ ಸರ್ಕಾರ ನಿರ್ಲಕ್ಷಿಸಿರುವುದು ಖಂಡಿಸಿ, ಈ ಬಗ್ಗೆ ಕೂಡಲೇ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಲಾಗುವುದು, ಅಲ್ಲದೇ ಪ್ರೊ.ರಂಗಪ್ಪ ಅವರು ಕುಲಪತಿಯಾಗಿದ್ದಾಗ ಸಂಘಕ್ಕೆ ನೀಡಿದ್ದ ಕಚೇರಿಯನ್ನು ಹಿಂಪಡೆದಿದ್ದು ತಮ್ಮ ಕಾರ್ಯಚಟುವಟಿಕೆ ನಡೆಸಲು ಹಿನ್ನಡೆಯಾಗಿದೆ, ಈಗ ಮತ್ತೊಮ್ಮೆ ಸರಸ್ವತಿಪುರಂನ ಇ.4ರಲ್ಲಿ ತನ್ನ ಕಾರ್ಯವನ್ನು ನಿರ್ವಹಿಸಲಿದೆ ಎಂದು ತಿಳಿಸಿದರು

ಪ್ರೊ.ನಾಗಣ್ಣ ಮಾತನಾಡಿ ಕುವೆಂಪು ಅವರ ಪಟ್ಟ ಶಿಷ್ಯರಾಗಿ ಶಿಷ್ಯ ಪರಂಪರೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಪ್ರಭುಶಂಕರ ಅವರ ಸ್ಮರಣಾರ್ಥವಾಗಿ ಅವರ ಆಧ್ಯ ಗುರುಗಳಾದ ಕುವೆಂಪು ಅವರ ನೆನಪಿನೊಂದಿಗೆ ಗುರು ಮತ್ತು ಶಿಷ್ಯರಿಬ್ಬರನ್ನು ಸ್ಮರಿಸಲಾಗುವುದು ಎಂದರು.

ಸಂಘದ ಸದಸ್ಯತ್ವ ಬಯಸುವವರು ಆನ್ ಲೈನ್ ಮೂಲಕವು ಅರ್ಜಿ ಸಲ್ಲಿಸಬಹುದಾಗಿದ್ದು, ಸದಸ್ಯರಾಗುವ ಮೂಲಕ ವಿವಿಯ ಘನತೆಯನ್ನು ಮತ್ತಷ್ಟು ಮೆರಗುಗೊಳಿಸೋಣವೆಂದು ಆಶಿಸಿದರು.

ಡಾ.ಕೃಷ್ಣಮೂರ್ತಿ ಇತರರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: