ಮೈಸೂರು

ಸುವೆಜ್ ಫಾರಂ ಗೆ ಶಾಸಕರ ಭೇಟಿ: ಅಧಿಕಾರಿಗಳಿಗೆ ತರಾಟೆ

mk-2ಮೈಸೂರಿನ ಕೆ.ಆರ್. ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ಮತ್ತು ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್ ಸೋಮವಾರ ಜೆ.ಪಿ. ನಗರದಲ್ಲಿರುವ ಸುವೆಜ್ ಫಾರಂ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಲ್ಲಿನ ಸಾರ್ವಜನಿಕರು ತ್ಯಾಜ್ಯ ಘಟಕದಿಂದ ಹೊರಹೊಮ್ಮುವ ವಾಸನೆ ತಡೆಯಲಾರದೆ ಶಾಸಕರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆದಿದೆ.

ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಯಾವ ರೀತಿ ಕಸ ವಿಲೇವಾರಿಯಾಗುತ್ತಿದೆ ಎಂಬುದನ್ನು ವೀಕ್ಷಿಸಿದರು. ಈ ಸಂದರ್ಭ ಶಾಸಕರಲ್ಲಿ ಸ್ಥಳೀಯರು ತಮಗೆ ತೀರಾ ತೊಂದರೆಯಾಗುತ್ತಿದೆ. ಸಾಯಂಕಾಲವಾಗುತ್ತಿದ್ದಂತೆ ಸಹಿಸಲು ಸಾಧ್ಯವಾಗದಂತಹ ವಾಸನೆ ಬರುತ್ತಿರುವುದರಿಂದ ನೆಮ್ಮದಿಯ ಜೀವನ ಕಷ್ಟವಾಗಿದೆ ಎಂದು ದೂರಿದರು. ಸಮಸ್ಯೆಯನ್ನು ಆಲಿಸಿದ ಶಾಸಕರು, ಫಾರಂನ ಉಸ್ತುವಾರಿ ಮಹೇಶ್ ಅವರಲ್ಲಿ ಈ ಕುರಿತು ಪ್ರಶ್ನಿಸಿದರು. ಶಾಸಕರ ಪ್ರಶ್ನೆಗೆ ಉತ್ತರಿಸಿದ ಮಹೇಶ್, ಈಗ ತುಂಬಾ ಇಬ್ಬನಿ ಬೀಳುತ್ತಿರುವುದರಿಂದ ಕಸಗಳೆಲ್ಲಾ ಒದ್ದೆಯಾಗಿ ವಾಸನೆ ಬರುತ್ತಿದೆ ಎಂದರು. ಅದಕ್ಕೆ ಶಾಸಕರು ಪ್ರತಿವರ್ಷವೂ ಇಬ್ಬನಿ ಬೀಳುತ್ತದೆ ಆ ಸಮಯದಲ್ಲಿ ಯಾವ ರೀತಿ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು ಎನ್ನುವದನ್ನು ಅರಿತಿರಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದರು.

ಮೈಸೂರು ನಗರದ 64 ವಾರ್ಡ್ ಗಳಿಂದ ದಿನವೊಂದಕ್ಕೆ 200 ಟನ್ ಕಸಗಳು ಬಂದು ಬೀಳುತ್ತವೆ. ಸರಿಯಾಗಿ ಡಿಕಂಪೋಸ್ ಆಗುತ್ತಿಲ್ಲ. ಮಷಿನ್ ಸಾಮರ್ಥ್ಯ ಕೇವಲ 150 ಟನ್ ಮಾತ್ರ. ಮಷಿನ್ 15 ವರ್ಷಗಳಷ್ಟು ಹಿಂದಿನದಾಗಿದ್ದು ಸರಿಯಾಗಿ ಕೆಲಸ ಮಾಡುತ್ತಿಲ್ಲ.  ಡಿಕಂಪೋಸ್ ಮಾಡಲಿಕ್ಕೆ ಜಾಗ ಸಾಲುತ್ತಿಲ್ಲ ಎಂದು ಹರೀಶ್ ಶಾಸಕರಿಗೆ ಮಾಹಿತಿ ನೀಡಿದರು.

ಎಲ್ಲವನ್ನೂ ಆಲಿಸಿದ ಶಾಸಕರು ಈ ಕುರಿತು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಶಾಸಕರ ಜೊತೆ ಜಿಲ್ಲಾಧಿಕಾರಿ ಡಿ. ರಂದೀಪ್ ಅವರೂ ಸ್ಥಳಕ್ಕೆ ಭೇಟಿ ನೀಡಿದ್ದರು.

Leave a Reply

comments

Related Articles

error: