ಕರ್ನಾಟಕಪ್ರಮುಖ ಸುದ್ದಿ

ರಾಯಚೂರು: ನ್ಯಾಯಾಧೀಶರ ವಿರುದ್ಧ ಕರಪತ್ರ ಹಂಚಿದ ನಕ್ಸಲರು!

ರಾಯಚೂರು (ಜೂನ್ 19): ರಾಯಚೂರು ನ್ಯಾಯಾಲಯದಲ್ಲಿ ನಕ್ಸಲ್ ಹೆಸರಿನಲ್ಲಿ ಕರ ಪತ್ರ ಹಂಚಲಾಗಿದ್ದು, ನ್ಯಾಯಾಧೀಶರು ಮತ್ತು ವಕೀಲರು ಭ್ರಷ್ಟರೆಂದು ಆರೋಪಿಸಲಾಗಿದೆ.

ಜೈ ನಕ್ಸಲ್ – ಜೈ ನಕ್ಸಲ್ ಎಂಬ ಘೋಷಣೆಗಳೊಂದಿಗೆ ಹಂಚಲಾಗಿರುವ ಈ ಕರಪತ್ರಗಳಲ್ಲಿ ಎಂ.ಮಹದೇವಯ್ಯ ಹಾಗೂ ಭ್ರಷ್ಟ ವಕೀಲರ ವಿರುದ್ಧ ಪ್ರಜೆಗಳು ಹೋರಾಡಲು ಕರಪತ್ರದಲ್ಲಿ ಕರೆ ನೀಡಲಾಗಿದೆ. ಕೇಸಿಗನುಗುಣವಾಗಿ ನ್ಯಾಯಾಧೀಶರು ಲಕ್ಷ ಲಕ್ಷ ಹಣ ಲಂಚ ಪಡೆಯುತ್ತಿದ್ದಾರೆ. ರಾಯಚೂರಿನ ಪ್ರತಿಯೊಬ್ಬ ರಾಜಕಾರಣಿಯೂ ಇವರಿಗೆ ಆಪ್ತರಾಗಿದ್ದಾರೆ. ಇವರ ತಿಂಗಳ ಆದಾಯ ಸರ್ಕಾರಿ ಸಂಬಳದ 20 ಪಟ್ಟು ಹೆಚ್ಚಿದೆ. ಹೈಕೋರ್ಟ್, ಸುಪ್ರೀಮ್‍ಕೋರ್ಟ್ ನ್ಯಾಯಾಧೀಶರೂ ಸಹ ತಮ್ಮ ಬೆನ್ನಿಗೆ ಇದ್ದಾರೆಂದು ಹೇಳಿಕೊಂಡು ಓಡಾಡುತ್ತಿದ್ದಾರೆಂದು ಆರೋಪಿಸಲಾಗಿದೆ.

ರಾಯಚೂರಿನ ಜನತೆ ಇಂಥ ನ್ಯಾಯಾಧೀಶನ ವಿರುದ್ಧ ಹೋರಾಡಬೇಕಿದೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದಾನೆ. ಇತ್ತೀಚಿನ ಪ್ರಕರಣವೊಂದಲ್ಲಿ ಲಕ್ಷ ಲಕ್ಷ ಹಣ ಪಡೆದು ಜಾಮೀನು ನೀಡಿರುತ್ತಾರೆ. ಯೋಚಿಸಿ ಪ್ರಜೆಗಳೇ ಹೋರಾಟಕ್ಕೆ ಮುನ್ನುಗ್ಗಿ ಎಂಬ ಘೋಷಣೆ ಒಳಗೊಂಡ ಕರಪತ್ರಗಳನ್ನು ಕೋರ್ಟ್ ಆವರಣದಲ್ಲಿ ಹಂಚಲಾಗಿದೆ.

ಕರಪತ್ರ ಹಂಚಿರುವ ಹಿನ್ನೆಲೆಯಲ್ಲಿ ಇಂದು ಕಾರ್ಯಕಲಾಪದಿಂದ ವಕೀಲರು ದೂರ ಉಳಿದಿದ್ದರು. ಆದರೆ, ನ್ಯಾಯಾಧೀಶರ ಮನವಿ ಮೇರೆಗೆ ವಕೀಲರ ಸಂಘದ ನಿರ್ಧಾರದಂತೆ ಸಾಮಾನ್ಯರಿಗೆ ತೊಂದರೆ ಆಗಬಾರದೆಂದು ಕಲಾಪಕ್ಕೆ ಹಾಜರಾಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. (ಎನ್.ಬಿ)

Leave a Reply

comments

Related Articles

error: