ಪ್ರಮುಖ ಸುದ್ದಿಮೈಸೂರು

ಸಮಾಜ ಧರ್ಮದಿಂದ ದೂರವಾಗುತ್ತಿದೆ : ಸ್ವರ್ಣವಲ್ಲಿ ಶ್ರೀ ಆತಂಕ

sirsi1ಸಮಾಜ ತನಗರಿವಿಲ್ಲದಂತೆ ನಿಧಾನವಾಗಿ ಅಧರ್ಮದ ಕಡೆಗೆ ಸಾಗುತ್ತಿದ್ದು ಧರ್ಮದಿಂದ ದೂರವಾಗುತ್ತಿದೆ ಎಂದು ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ವತಿಯಿಂದ ಸೋಮವಾರ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ಭಗವದ್ಗೀತಾ ಅಭಿಯಾನದ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ಮೇಲ್ನೋಟಕ್ಕೆ ಅನೇಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಅವುಗಳ ಒಳಹೊಕ್ಕು ನೋಡಿದರೆ ಸಮಾಜ ಧರ್ಮದಿಂದ ಹಿಮ್ಮುಖವಾಗಿ ಚಲಿಸುತ್ತಿರುವುದು ಗೋಚರಿಸುತ್ತದೆ. ಆಧುನಿಕ ಬದುಕಿಗೆ ಮಾರುಹೋಗಿ ವೇದ, ಸಂಸ್ಕೃತ ಓದುವವರ ಸಂಖ್ಯೆ ತುಂಬಾ ಕ್ಷೀಣಿಸುತ್ತಿದೆ. ಇದರಿಂದ ಧರ್ಮ ಅಧರ್ಮದೆಡೆಗೆ ಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪರಭಾಷೆಯ ಅಂಧಾಭಿಮಾನದಿಂದ ಇಂದು ಹುಟ್ಟುವ ಮಕ್ಕಳಿಗೆ ದೇವರ ಹೆಸರುಗಳನ್ನಿಡುತ್ತಿಲ್ಲ. ಯಾರಲ್ಲಿಯೂ ಸಂಸ್ಕೃತಿ, ಪರಂಪರೆ, ದೈವಿಕ ಚಿಂತನೆಯಿಲ್ಲ. ವಿದೇಶಿ ಭೋಗ ಜೀವನಕ್ಕೆ ಮನಸೋತು ತಮ್ಮ ತನವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಸನ್ಯಾಸಿಗಳು, ಯತಿಗಳ ಬಗೆಗೆ ಗೌರವ ಭಾವನೆಯೇ ಇಲ್ಲ. ಎಲ್ಲರನ್ನೂ ಕೀಳಾಗಿ ಕಾಣುವ ಮನೋಭಾವ ಹೆಚ್ಚಾಗುತ್ತಿದೆ. ಇದರಿಂದ ಸಮಾಜ ಅವ್ಯವಸ್ಥೆಯ ಗೂಡಾಗುವತ್ತ ಸಾಗುತ್ತಿದೆ. ಇದೆಲ್ಲವನನ್ನು ನಿವಾರಿಸಿ, ಧರ್ಮದೆಡೆಗೆ ಮುಖ ಮಾಡುವ, ವ್ಯಕ್ತಿತ್ವ ವಿಕಸನ, ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಭಾವೈಕ್ಯತೆಯ ಉದ್ದೇಶದಿಂದ ಭವಗದ್ಗೀತಾ ಸಮರ್ಪಣಾ ಅಭಿಯಾನವನ್ನು ಎಲ್ಲಾ ಜಿಲ್ಲೆಗಳಲ್ಲೂ  ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಮಹಾರಾಜ ಕಾಲೇಜು ಶೂನ್ಯತೆಯತ್ತ ಸಾಗುತ್ತಿದೆ: ತನ್ನದೇ ಆದ ವಿಶಿಷ್ಟ ಇತಿಹಾಸವುಳ್ಳ ಮಹಾರಾಜ ಸಂಸ್ಕೃತ ಕಾಲೇಜು ಶೂನ್ಯತೆಯತ್ತ ಸಾಗುತ್ತಿದೆ. ದಿನ ಕಳೆದಂತೆ ತನ್ನ ಒಂದೊಂದೆ ಅಂಗಗಳನ್ನು ಕಳೆದುಕೊಂಡು ವಿಕಲಾಂಗವಾಗುತ್ತಿದೆ. ಇತ್ತ ಸರ್ಕಾರದ ಪ್ರೋತ್ಸಾಹವೂ ಇಲ್ಲ, ಅತ್ತ ವಿದ್ಯಾರ್ಥಿಗಳು ಸಹ ಬರುತ್ತಿಲ್ಲ. ಇದರಿಂದ ಮುಚ್ಚುವ ಸ್ಥಿತಿಗೆ ತಲುಪಿದೆ. ಕಾಲೇಜಿನಲ್ಲಿದ್ದ ವೇದ, ಸಂಸ್ಕೃತ ವಾತಾವರಣವೇ ಮಾಯವಾಗಿದೆ. ಇನ್ನಾದರೂ ಸರ್ಕಾರ ಅದರತ್ತ ಗಮನಹರಿಸಿ ಸಂಸ್ಕೃತಿ ಹಾಗೂ ಸಮಾಜದ ಉಳಿವಿಗೆ ಮುಂದಾಗಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಭಗವದ್ಗೀತೆಯ 7 ಹಾಗೂ 17ನೇ ಅಧ್ಯಾಯವನ್ನು ಪಠಿಸಲಾಯಿತು.

ಕಾರ್ಯಕ್ರಮದಲ್ಲಿ ಕೆ.ಆರ್.ನಗರದ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರ ಭಾರತೀ ಮಹಾಸ್ವಾಮೀಜಿ, ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ್ಷ ಟಿ.ಶಿವಪ್ರಕಾಶ್, ಪ್ರಧಾನ ಕಾರ್ಯದರ್ಶಿ ಡಿ.ಎನ್.ಕೃಷ್ಣಮೂರ್ತಿ, ಅರವಿಂದ ಪರಿಮಳ ವರ್ಕ್ಸ್ನ ಹೆಚ್.ಎಸ್.ರಾಮತೀರ್ಥ, ಸಮಾಜ ಸೇವಕ ಕೆ.ರಘುರಾಂ ಸೇರಿದಂತೆ ವಿದ್ಯಾರ್ಥಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.

Leave a Reply

comments

Related Articles

error: