ಕರ್ನಾಟಕಪ್ರಮುಖ ಸುದ್ದಿ

ನೀತಿಸಂಹಿತೆ ಉಲ್ಲಂಘಿಸಿ 84 ಪಿಯುಸಿ ಕಾಲೇಜುಗಳಿಗೆ ನೀಡಿದ್ದ ಅನುಮತಿ ರದ್ದಾಗುವ ಸಾಧ್ಯತೆ

ಬೆಂಗಳೂರು (ಜೂನ್ 19): ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ರಾಜ್ಯದಲ್ಲಿ ಹೊಸ 84 ಖಾಸಗಿ ಪದವಿ ಪೂರ್ವ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮಾಹಿತಿಗಳ ಪ್ರಕಾರ, ಮೇ 15ರಿಂದ ಜೂನ್ 12ರವರೆಗ ವಿಧಾನಪರಿಶತ್ ಸದಸ್ಯರ ಆಯ್ಕೆ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿತ್ತು. ಆದರೂ ಶಿಕ್ಷಣ ಇಲಾಖೆ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ. ಪ್ರಸ್ತಾವನೆ ನಿರ್ದೇಶಕರ ಮಟ್ಟದಲ್ಲಿ ತಿರಸ್ಕೃತವಾದರೂ ಕೂಡ ಅದನ್ನು ಸಚಿವಾಲಯ ಮಟ್ಟಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.

ಶಿಕ್ಷಣ ಇಲಾಖೆ ಮತ್ತು ರಾಜ್ಯ ಚುನಾವಣಾ ಆಯೋಗದ ನಡುವೆ ನಡೆದ ಸಂವಹನದಲ್ಲಿ ದಾಖಲಾದ ಪ್ರಕಾರ ಪ್ರಸ್ತಾವನೆ ಮೇ 29ರಂದು ತಿರಸ್ಕೃತಗೊಂಡಿದೆ. ಶಾಲೆ-ಕಾಲೇಜುಗಳಿಗೆ ಸಹ ಅದೇ ದಾಖಲೆಯಲ್ಲಿ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಧಾನಪರಿಷತ್ ಸದಸ್ಯ ಅರುಣ್ ಶಹಪುರ್, ಈ ವಿಷಯವನ್ನು ಮೊದಲು ಎತ್ತಿದ್ದು ನಾನು, ಇದು ಕೇವಲ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾತ್ರವಲ್ಲ, ಹಲವು ಅಕ್ರಮಗಳಿಗೆ ಕೂಡ ಸಂಬಂಧಪಟ್ಟದ್ದಾಗಿದೆ. ಅನುಮೋದನೆ ನೀಡಿದ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಪ್ರಧಾನ ಕಾರ್ಯದರ್ಶಿ ಮಟ್ಟದಲ್ಲಿ ಉನ್ನತ ಮಟ್ಟದ ತನಿಖೆಗೆ ನಾವು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಈ ಮಧ್ಯೆ ಪಿಯುಸಿ ಕಾಲೇಜುಗಳ ವ್ಯವಸ್ಥಾಪಕ ಮಂಡಳಿ ಅನುಮೋದನೆ ಪತ್ರ ಸ್ವೀಕರಿಸಿದ್ದನ್ನು ಖಚಿತಪಡಿಸಿದ್ದು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ನಮಗೆ ಪತ್ರ ಸಿಕ್ಕಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಈ ದಾಖಲೆಯ ಪತ್ರವನ್ನು ತಿರಸ್ಕರಿಸಿದ್ದಾರೆ. ಆದರೆ ನಂತರ ಪ್ರಧಾನ ಕಾರ್ಯದರ್ಶಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಹಪುರ್ ತಿಳಿಸಿದ್ದಾರೆ.

ಸರ್ಕಾರ ಕಳೆದ ಫೆಬ್ರವರಿಯಲ್ಲಿ ನೀಡಿರುವ ಆದೇಶ ಪ್ರಕಾರ, ಈ ವಿಷಯದಲ್ಲಿ ತೀರ್ಮಾನಿಸುವ ಅಧಿಕಾರವನ್ನು ಪಿಯುಸಿ ಇಲಾಖೆಯ ನಿರ್ದೇಶಕರಿಗೆ ನೀಡಿತ್ತು. ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಸರ್ಕಾರಿ ಕಾಲೇಜುಗಳಿರುವ 3 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಖಾಸಗಿ ಕಾಲೇಜುಗಳು ಸ್ಥಾಪನೆಯಾಗುವುದರಿಂದ ತಿರಸ್ಕರಿಸಲಾಗಿತ್ತು ಎನ್ನುತ್ತಾರೆ ಶಹಪುರ್.

ರಾಜ್ಯದಲ್ಲಿ ಹೆಚ್ಚುತ್ತಿರುವ ಖಾಸಗಿ ಕಾಲೇಜುಗಳ ಸಂಖ್ಯೆಯಿಂದ ಸರ್ಕಾರಿ ಪಿಯುಸಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಗುವುದನ್ನು ತಡೆಯಲು ಅನುಮತಿಯನ್ನು ನಿರಾಕರಿಸಲಾಗುತ್ತಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ. (ಎನ್.ಬಿ)

Leave a Reply

comments

Related Articles

error: