ಮೈಸೂರು

ದೇಶದಲ್ಲಿ ಅಪರಾಧಿಗಳನ್ನು ರಕ್ಷಿಸುವ ಕೆಲಸವಾಗುತ್ತಿದೆ: ಪ್ರೊ. ಆರ್.ಎಂ. ಚಿಂತಾಮಣಿ

ನಮ್ಮ ದೇಶದಲ್ಲಿ ಅಪರಾಧಿಗಳನ್ನು ರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಜೆ.ಎಸ್.ಎಸ್. ಕಾಲೇಜಿನ ವಾಣಿಜ್ಯ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಎಂ.ಚಿಂತಾಮಣಿ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಜೆ.ಎಲ್.ಬಿ. ರಸ್ತೆಯಲ್ಲಿರುವ ರೋಟರಿ ಕೇಂದ್ರ ಸಭಾಂಗಣದಲ್ಲಿ ಸೋಮವಾರ ಅಂತರಸಂತೆ ಪ್ರಕಾಶನ ಮೈಸೂರು ಮತ್ತು ಕನ್ನಡಿಗರ ಸಹಕಾರ ಜ್ಯೋತಿ ಪತ್ರಿಕೆ ವತಿಯಿಂದ ನಡೆದ ಅನಾಣ್ಯೀಕರಣದಿಂದ ಅರ್ಥವ್ಯವಸ್ಥೆಯ ಮೇಲೆ ಆಗುವ ಪರಿಣಾಮಗಳು ಕುರಿತ ವಿಚಾರಗೋಷ್ಠಿಯಲ್ಲಿ ಪ್ರೊ. ಆರ್.ಎಂ. ಚಿಂತಾಮಣಿ ವಿಷಯ ಮಂಡಿಸಿದರು.

ಖೋಟಾನೋಟನ್ನು ರದ್ದು ಮಾಡಲು ಸಾಧ್ಯವಿಲ್ಲ. ಅದು ಚಲಾವಣೆಯಲ್ಲಿರಲಿದೆ. ನಗದು ರಹಿತ ಮಾಡಬೇಕು ಅಂತ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಆದರೆ ನಮ್ಮಂಥ ಅಕ್ಷರಸ್ಥರೇ ಡಿಜಿಟಲೀಕರಣದಲ್ಲಿ ಅನಕ್ಷರಸ್ಥರಾಗಿದ್ದೇವೆ. ಹೀಗಿದ್ದಾಗ ಗ್ರಾಮೀಣ ಭಾಗದಲ್ಲಿನ ಜನತೆಗೆ ಇದು ಹೇಗೆ ತಿಳಿಯಲಿದೆ. ಅವರು ಹೇಗೆ ಇದಕ್ಕೆ ಸ್ಪಂದಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಕಪ್ಪು ಹಣ ರದ್ದು ಮಾಡಬೇಕೆನ್ನುವ ಹೋರಾಟ ಸರಿಯೇ, ಆದರೆ ಕಪ್ಪುಹಣ ನಿರ್ವಹಣೆ ಆಗದಿರಲು ಸರಿಯಾದ ಮಾರ್ಗದರ್ಶನ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ 26 ಸಾವಿರ ಕಾಯ್ದೆಗಳಿವೆ. ನಮ್ಮ ದೇಶದಲ್ಲಿ ಕಾಯ್ದೆಗಳು ಕಡಿಮೆಯಾಗಿ, ಸರಿಯಾಗಿ ಬಳಕೆಯಾಗಬೇಕು. ಮತ್ತು ಕಾಯ್ದೆಗಳು ಗಟ್ಟಿಯಾಗಬೇಕು ಎಂದರು.

ವಿದೇಶಗಳಲ್ಲಿ ಸಣ್ಣ ತಪ್ಪು ಮಾಡಿದರೂ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ . ಆದರೆ ನಮ್ಮಲ್ಲಿ ದೊಡ್ಡ ತಪ್ಪು ಮಾಡಿದರೂ ಶಿಕ್ಷೆ ಮಾತ್ರ ಸಣ್ಣದೇ. ಎಷ್ಟೋ ದೊಡ್ಡ ದೊಡ್ಡ ಹಗರಣಗಳಲ್ಲಿ ಸಿಲುಕಿದ್ದಾರೆ ಎಂದು ಮಾಧ್ಯಮಗಳಲ್ಲಿ ತೋರಿಸಲಾಗಿರುತ್ತಾದರೂ ಅವರು ಜೈಲಿಗೆ ಹೋಗಿ ಶಿಕ್ಷೆ ಅನುಭವಿಸದೇ ಬೇಲ್ ಮೇಲೆ ಹೊರಗೆ ಬಂದಾಗಿರುತ್ತದೆ. ಆರ್ಥಿಕ ಅಪರಾಧಿಗಳಿಗೆ ನಮ್ಮವರೇ ರಕ್ಷಣೆ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಮಗೆ ದುರಾಸೆ ಹೆಚ್ಚು. ನಮ್ಮಲ್ಲಿರುವ ದುರಾಸೆ ಕಡಿಮೆಯಾದಾಗ ಎಲ್ಲವೂ ಸರಿಯಾಗುತ್ತದೆ. ಮೊದಲು 2000 ರೂ.ನೋಟು ಬಿಡುವ ಬದಲು 500 ರೂ. ನೋಟು ಬಿಡಬೇಕಿತ್ತು. ಆಗ ಇಷ್ಟೊಂದು ಸಮಸ್ಯೆ ಎದುರಾಗುತ್ತಿರಲಿಲ್ಲ. ಸೈಬರ್ ಕ್ರೈಂ ತಂತ್ರಜ್ಞಾನಗಳು ಇನ್ನಷ್ಟು ಗಟ್ಟಿಕೊಂಡು ಭದ್ರತೆಯನ್ನು ಒದಗಿಸಬೇಕು. ಪ್ರತಿಯೊಂದಕ್ಕೂ ಭದ್ರತೆ ಇದ್ದಾಗ ಕಾರ್ಯ ಯಶಸ್ವಿಯಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ.ಕೆ. ರೇಣುಕಾಚಾರ್ಯ ಉದ್ಘಾಟಿಸಿದರು.

ವೇದಿಕೆಯಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ವಿಶ್ವನಾಥ, ವಕೀಲ ಟಿ.ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: