ಕರ್ನಾಟಕಪ್ರಮುಖ ಸುದ್ದಿಮೈಸೂರು

ಮಾಜಿ ಸಿಎಂ ಸಿದ್ದರಾಮ್ಯಯನವರ ವಿರೋಧಿ ತಂಡದ ಬೋಗಸ್ ಕುತಂತ್ರ : ಡಾ.ವಿಜಯ್ ಕುಮಾರ್ ಆರೋಪ

ಹೈಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ

ಮೈಸೂರು,ಜೂ.20 : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜಮೀನು ಖರೀದಿಗೆ ಸಂಬಂಧಿಸಿದಂತೆ ಅಧಿಕಾರಿ ದುರ್ಬಳಕೆ ಮಾಡಿಕೊಂಡಿದ್ದರು ಎಂದು ಆರೋಪಿಸಿ ಒಬ್ಬರು ನ್ಯಾಯಾಲಯದ ಮೊರೆ ಹೋಗಿ ಎಫ್‌ಐಆರ್ ದಾಖಲಿಸುವಂತೆ ಮಾಡಿರುವುದು ಸಿದ್ದರಾಮಯ್ಯ ಅವರ ತೇಜೋವಧೆಗೆ ನಡೆಸಿದ ಯತ್ನವಾಗಿದ್ದು, ಆರೋಪಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ದೂರಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸಮಿತಿಯ ಕಾನೂನು ಘಟಕದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು ಸಿಎಂ ಅಧಿಕಾರದಿಂದ ಇಳಿದ ಕೂಡಲೇ ಅವರ ಹೆಸರು ಕೆಡಿಸಲು ತಂಡವೊಂದು ಕೆಲಸ ಮಾಡುತ್ತಿದ್ದು, ಅದರ ಭಾಗವೇ ಅವರು ಭೂ ಅಕ್ರಮ ಎಸಗಿದ್ದಾರೆಂದು ಮಾಡಿರುವ ಆರೋಪವಾಗಿದೆ ಎಂದು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆಗೊಳಿಸಿದ ಅವರು, ವಿರೋಧಿ ತಂಡವೊಂದರ ಬೋಗಸ್ ಕುತಂತ್ರವಾಗಿದ್ದು, ಜೊತೆಗೆ ಹಿನಕಲ್ ಬಳಿಯ ಸರ್ವೆ ನಂ.70/4 ಬಿ ಭೂಮಿಯನ್ನು ಸಿದ್ದರಾಮಯ್ಯ ಅವರು ಖರೀದಿಸಿದ್ದರೆಂಬ ಬಗ್ಗೆ ಯಾವುದೇ ಅಕ್ರಮಗಳಿಲ್ಲ. ಅದರ ಮಾಲೀಕರಾಗಿದ್ದ ಸಾಕಮ್ಮ, ಅಣ್ಣಯ್ಯ, ಸುನಂದ ಎಂಬುವವರು ಈ ಹಿಂದೆಯೇ ತಮ್ಮ ಜಮೀನನ್ನು ಮುಡಾ ಸ್ವಾಧೀನ ಪಡಿಸಿಕೊಂಡಿದೆಯೇ ಎಂದು ಸ್ವಯಿಚ್ಛೆಯಿಂದ ಮುಡಾಕ್ಕೆ ಅರ್ಜಿ ಸಲ್ಲಿಸಿ, ಸ್ವಾಧೀನವಾಗಿಲ್ಲ ಎಂಬ ಉತ್ತರ ಪಡೆದಿದ್ದರು.

ಇದೆಲ್ಲ ಗತಿಸಿ ಬಹಳ ವರ್ಷಗಳ ನಂತರವೇ ಸಿದ್ದರಾಮಯ್ಯ ಅವರು ಸಾಕಮ್ಮ ಅವರಿಂದ ಹತ್ತು ಗುಂಟೆ ಜಮೀನು ಖರೀದಿಸಿದ್ದು, ತಾವೇ ನಿಂತು ಅಲಿನೇಷನ್ ಮಾಡಿಸಿದ್ದರು ಎಂಬ ಅವರ ವಿರುದ್ಧದ ಆರೋಪ ಸತ್ಯಕ್ಕೆ ದೂರವಾದುದಾಗಿದೆ ಎಂದರು.

ಅಲ್ಲದೆ, ತಾವು ಖರೀದಿಸಿದಷ್ಟೇ ಜಾಗದಲ್ಲಿ ಅವರು ಮನೆ ಕಟ್ಟಿಕೊಂಡು, ಬಳಿಕ ಚುನಾವಣೆ ವೆಚ್ಚಕ್ಕಾಗಿ 2003ರಲ್ಲಿಯೇ ಜಾಗ ಮಾರಾಟ ಸಹಾ ಮಾಡಿದ್ದಾರೆ. ಇದಲ್ಲದೆ, ಯಾವುದೇ ಪ್ರಕರಣ ನ್ಯಾಯಾಲಯದ ವ್ಯಾಪ್ತಿಗೆ ಬರಲು ಇರುವ ಕಾಲಮಿತಿ ಮೀರಿದ ಬಳಿಕ ಈಗ ಅವರ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದು, ಈ ರೀತಿ ಮಾಡಿರುವವರ ವಿರುದ್ಧ ಮಾನಹಾನಿ ಹೂಡಬೇಕೇ ಎಂಬ ಬಗ್ಗೆ ಚಿಂತಿಸುವುದರ ಜೊತೆಗೆ, ಈಗ ನ್ಯಾಯಾಲಯ ನೀಡಿರುವ ಆದೇಶ ಪ್ರಶ್ನಿಸುವುದಾಗಿ ತಿಳಿಸಿದರು.

ಕಾನೂನು ಘಟಕದ ಪದಾಧಿಕಾರಿಗಳಾದ ಪಾಳೆಯ ಸುರೇಶ್, ನಂದೀಶ್, ರಘು, ಚರಣ್, ಕಾಂತರಾಜ್, ತಿಮ್ಮಯ್ಯ  ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: