
ಪ್ರಮುಖ ಸುದ್ದಿಮೈಸೂರು
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಲಿ: ಸಚಿನ್ ಮಿಗಾ
ಅದಾನಿ, ಅಂಬಾನಿಯಂತಹ ವಾಣಿಜ್ಯೋದ್ಯಮಿಗಳ ಚುನಾವಣಾ ಋಣ ತೀರಿಸಲು ಪ್ರಧಾನಿ ನರೇಂದ್ರ ಮೋದಿಯವರು ನೋಟು ಅಮಾನ್ಯಗೊಳಿಸಿದ್ದು, ಇದರಿಂದ ದೇಶದ ಶ್ರೀಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಿಸಾನ್ ಖೇತ್ ಮಸ್ದೂರ್ ರಾಜ್ಯಾಧ್ಯಕ್ಷ ಸಚಿನ್ ಮಿಗಾ ವಿಷಾದಿಸಿದರು.
ಸೋಮವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೋಟು ಅಮಾನ್ಯಗೊಳಿಸಿದ್ದರ ಹಿಂದೆ ದೊಡ್ಡ ಸಂಚಿದೆ. ಇದನ್ನು ಮರೆಮಾಚಲು ರಿಲಯನ್ಸ್ ಜಿಯೋ ಸಿಮ್ ಬಿಡುಗಡೆಗೊಳಿಸುವ ಮೂಲಕ ಯುವಜನಾಂಗದ ಗಮನವನ್ನು ಬೇರೆಡೆಗೆ ಸೆಳೆಯಲಾಗಿದೆ. ಕಾಳದಂಧೆ ಕಡಿವಾಣಕ್ಕೆ ನೋಟು ಅಮಾನ್ಯ ಬೇಕಾಗಿರಲಿಲ್ಲ, ಮೋದಿಯವರ ತಂತ್ರ ಸಂಪೂರ್ಣ ವಿಫಲವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದಲೂ ಶ್ರೀಸಾಮಾನ್ಯರು, ಶ್ರಮಿಕರು, ಕೂಲಿಕಾರ್ಮಿಕರು ಹಾಗೂ ಸಾಮಾನ್ಯ ವರ್ಗದ ಜನರ ಬದುಕು ಹಣವಿಲ್ಲದೆ, ಕೂಲಿಯಿಲ್ಲದೇ ದಿನನಿತ್ಯ ಜೀವನವೇ ಕಷ್ಟವಾಗಿದೆ. ಪ್ರತಿ ಹೆಜ್ಜೆಯಲ್ಲೂ ಪ್ರಧಾನಿಯನ್ನು ಸಮರ್ಥಿಸಿಕೊಳ್ಳುವ ಸಂಸದ ಪ್ರತಾಪ್ ಸಿಂಹ ಅವರ ನಡವಳಿಕೆ ಖಂಡನೀಯ ಎಂದರು.
ರೈತರ ಸಾಲಮನ್ನಾವಾಗಲಿ : ಪ್ರತಿ 26 ನಿಮಿಷಕ್ಕೊಬ್ಬ ರೈತರು ಸಾಲದ ಸುಳಿಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದು ಈಗಾಗಲೆ ರಾಜ್ಯ ಸರ್ಕಾರ ಸಹಕಾರ ಬ್ಯಾಂಕ್ಗಳಲ್ಲಿ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ಮಾನವೀಯತೆ ಮೆರೆದಿದೆ. ಇದರಂತೆ ಕೇಂದ್ರ ಸರ್ಕಾರವೂ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ ಸಾಲವನ್ನು ಶೇ.50ರಷ್ಟು ಮನ್ನಾ ಮಾಡಲಿ. ಈ ಬಗ್ಗೆ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ಹಿರಿಯ ಮುಖಂಡ ಯಡಿಯೂರಪ್ಪ ಹಾಗೂ ಸಂಸದರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಮಾಲೋಚಿಸಲಿ ಎಂದು ಆಗ್ರಹಿಸಿದರು. ರೈತರ ಸಾಲ ಮನ್ನಾ ಮಾಡಲು ಅನುದಾನವಿಲ್ಲ, ಆದರೆ ವಿಜಯಮಲ್ಯನಂತಹ ಬೃಹತ್ ವಾಣಿಜ್ಯೋದ್ಯಮಿಗಳ 1.14 ಲಕ್ಷ ಕೋಟಿ ರೂಪಾಯಿ ಮನ್ನಾ ಹೇಗೆ ಮಾಡಿದರು? ರಿಲೆಯನ್ಸ್ ಮುಖ್ಯಸ್ಥರಾಗಿದ್ದ ಊರ್ಜಿತ್ ಪಟೇಲ್ರನ್ನು ಆರ್.ಬಿ.ಐ. ಗವರ್ನರ್ ಆಗಿ ನೇಮಕ ಮಾಡಿರುವುದು ಅನುಮಾನಗಳಿಗೆ ಎಡೆಮಾಡುತ್ತಿದೆ ಎಂದು ಖಾರವಾಗಿ ಪ್ರತಿಕ್ರಿಯಸಿದರು.
ಯುಪಿಎ ಸರ್ಕಾರವಿದ್ದಾಗ ಪರಿಸರ ಮಾಲಿನ್ಯಕ್ಕಾಗಿ ಆದಾನಿ ಗ್ರೂಪ್ಸ್ಗೆ 200 ಕೋಟಿ ರೂಪಾಯಿ ದಂಡ ವಿಧಿಸಲಾಗಿತ್ತು. ಇದನ್ನು ನರೇಂದ್ರ ಮೋದಿಯವರು ವಜಾಗೊಳಿಸಿದ್ದಾರೆ. ಚುನಾವಣಾ ವೇಳೆಯಲ್ಲಿ ಸ್ವಿಸ್ ಬ್ಯಾಂಕ್ನಲ್ಲಿರುವ ಕಾಳಧನವನ್ನು ನೂರು ದಿನಗಳೊಳಗೆ ತರಲಾಗುವುದು ಎಂದು ದೇಶದ ಜನರನ್ನು ನಂಬಿಸಿ ಮೋಸ ಮಾಡಿದ್ದಾರೆ. ಈಗ ಗಮನ ಬೇರೆಡೆ ಸೆಳೆಯಲು ನೋಟು ಅಮಾನ್ಯಗೊಳಿಸಿದ್ದಾರೆ. ರೈತರ ಜೀವ ವಿಮೆ ಹಾಗೂ ಬೆಳೆ ವಿಮೆಯನ್ನು ಅದಾನಿ ಗ್ರೂಪ್ಸ್ ಗೆ ವರ್ಗಾಯಿಸಿರುವುದರ ಹಿಂದೆ ಷಡ್ಯಂತರವಿದ್ದು ಈ ಕ್ರಮದಿಂದ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ ಎಂದು ದೂರಿದರು. ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ನ್ಯಾಯ ಲಭಿಸಬೇಕು. ರೈತರ ಸಾಲ ಮನ್ನಾವಾಗಬೇಕು ಹಾಗೂ ಬೆಳೆ ವಿಮೆ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಬೇಕು ಎಂದು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲಾ ಕಾಂಗ್ರೆಸ್ ರೈತ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಜನಪ್ರತಿನಿಧಿಗಳು ಸೇರಿ ಸಂಸತ್ತಿಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರ ಅಧ್ಯಕ್ಷ ಟಿ.ಎಸ್. ರವಿಶಂಕರ್, ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಮಹೇಶ್ ಕೌಜಲಗಿ, ಜಿಲ್ಲಾ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕಿರಣ್, ಜಿಲ್ಲಾಧ್ಯಕ್ಷ ಡಾ. ವಿ.ಜಿ. ಜಯಕುಮಾರ್, ಡೈರಿ ವೆಂಕಟೇಶ್ ಉಪಸ್ಥಿತರಿದ್ದರು.