ಕ್ರೀಡೆ

ಫಿಫಾ ವಿಶ್ವಕಪ್: ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ 10ರ ಬಾಲಕ ರಿಷಿ ತೇಜ್.!

ನವದೆಹಲಿ,ಜೂ.20-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ನಲ್ಲಿ ಭಾಗವಹಿಸಲು ಭಾರತ ಅರ್ಹತೆ ಗಿಟ್ಟಿಸಿಕೊಳ್ಳದೆ ಇದ್ದರೂ ಫುಟ್ಬಾಲ್ ನಲ್ಲಿ ದೇಶವನ್ನು ಪ್ರತಿನಿಧಿಸುವ ಅದೃಷ್ಟ ಕನ್ನಡದ ಬಾಲಕನಿಗೆ ಸಿಕ್ಕಿದೆ.

ಫಿಫಾ ವಿಶ್ವಕಪ್ ಪಂದ್ಯದಲ್ಲಿ ಅಧಿಕೃತ ಚೆಂಡನ್ನು ಹಿಡಿದು ಮುನ್ನಡೆಯುವ ಅವಕಾಶವನ್ನು ಕರ್ನಾಟಕದ 10 ವರ್ಷದ ಬಾಲಕ ರಿಷಿ ತೇಜ್ ಗಿಟ್ಟಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾನೆ.

ರಿಷಿ ತೇಜ್ ಜತೆಗೆ ತಮಿಳುನಾಡಿನ 11 ವರ್ಷದ ನಥಾನಿಯಾ ಜಾನ್‌ ಕೆ ಸಹ ಅಧಿಕೃತ ಚೆಂಡನ್ನು ಹಿಡಿದು ಮುನ್ನಡೆಯುವ ಗೌರವ ಸ್ವೀಕರಿಸಲಿದ್ದಾರೆ.

ರಿಷಿ ತೇಜ್ ಬೆಲ್ಜಿಯಂ ಮತ್ತು ಪನಾಮ ನಡುವಿನ ಪಂದ್ಯದಲ್ಲಿ ಅಧಿಕೃತ ಚೆಂಡನ್ನು ಹಿಡಿದು ಮುನ್ನಡೆದಿದ್ದಾರೆ. ಈ ಪಂದ್ಯದಲ್ಲಿ ಪನಾಮ ವಿರುದ್ಧ ಬೆಲ್ಜಿಯಂ 3-0 ಅಂತರದ ಗೆಲುವು ದಾಖಲಿಸಿತ್ತು.

ಅತ್ತ ನಥಾನಿಯಾ, ಬ್ರೆಜಿಲ್‌ ಮತ್ತು ಕೋಸ್ಟ ರಿಕಾ ನಡುವಿನ ಪಂದ್ಯದ ಅಧಿಕೃತ ಚೆಂಡನ್ನು ಹಿಡಿಯಲಿದ್ದಾರೆ. ಈ ಪಂದ್ಯವು ಜೂ.22ರಂದು ನಡೆಯಲಿದೆ.

ಗುರ್‌ಗಾಂವ್‌ನಲ್ಲಿ ಕಳೆದ ತಿಂಗಳು ನಡೆದ ಒಎಂಬಿಸಿ (ಅಫಿಸಿಯಲ್‌ ಮ್ಯಾಚ್‌ ಬಾಲ್‌ ಕ್ಯಾರಿಯರ್‌) ಕಾರ್ಯಕ್ರಮದಲ್ಲಿ ಭಾರತ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ ಛೆಟ್ರಿ ಈ ಇಬ್ಬರು ಬಾಲಕರನ್ನು ಆಯ್ಕೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ 1600 ಮಕ್ಕಳು ಪಾಲ್ಗೊಂಡಿದ್ದರಾದರೂ ಅಂತಿಮವಾಗಿ 50 ಮಂದಿಯನ್ನು ಅಂತಿಮ ಆಯ್ಕೆಗೆ ಪರಿಗಣಿಸಲಾಗಿತ್ತು. (ಎಂ.ಎನ್)

Leave a Reply

comments

Related Articles

error: