ಮೈಸೂರು

ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಶ್ರೀ ನಾಲ್ವಡಿ ಸೇವಾ ರತ್ನ ಪ್ರಶಸ್ತಿ ಪ್ರದಾನ

ಮೈಸೂರು,ಜೂ.20-ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 134ನೇ ಜಯಂತಿ ಪ್ರಯುಕ್ತ ಕರ್ನಾಟಕ ಸೇನಾ ಪಡೆಯ ಜಿಲ್ಲಾ ಘಟಕದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಆರು ಸಾಧಕರಿಗೆ ಶ್ರೀ ನಾಲ್ವಡಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಗರದ ಜೆಎಲ್ ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಘಟನೆ ಕ್ಷೇತ್ರದಲ್ಲಿ ನಿವೃತ್ತ ಪದವಿಪೂರ್ವ ನಿರ್ದೇಶಕ ಶ್ರೀಧರರಾಜೇ ಅರಸ್, ಧಾರ್ಮಿಕ ಕ್ಷೇತ್ರದಲ್ಲಿ ಚಾಮುಂಡಿಬೆಟ್ಟದ ಅರ್ಚಕರಾದ ಎಂ.ಡಿ.ಸೋಮಣ್ಣ, ಪುರಾತತ್ವ ಕ್ಷೇತ್ರದಲ್ಲಿ ನಿವೃತ್ತ ಪುರಾತತ್ವಶಾಸ್ತ್ರದ ಪ್ರಾಧ್ಯಾಪಕ ಎನ್.ಎಸ್.ರಂಗರಾಜು, ಶಿಕ್ಷಣ ಕ್ಷೇತ್ರದಲ್ಲಿ ಮಹಾರಾಣಿ ಸ್ನಾತಕೋತ್ತರ ಕಾಲೇಜಿನ ಪ್ರಾಧ್ಯಾಪಕಿ ಡಾ.ಎಂ.ಎಸ್.ಅನಿತ, ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತಿ ಡಾ.ಸುತ್ತ ಅಕ್ಕಿ, ಶಿಲ್ಪಕಲೆ ಕ್ಷೇತ್ರದಲ್ಲಿ ದೇವಸ್ಥಾನಗಳ ಖ್ಯಾತ ಶಿಲ್ಪಿ ಎ.ದೇವರಾಜ್ ಅವರಿಗೆ ಶ್ರೀ ನಾಲ್ವಡಿ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕರಾದ ಟಿ.ಎಸ್.ಸುಬ್ರಹ್ಮಣ್ಯ ಅವರು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು. ಅರಸು ಮಂಡಳಿ ಸಂಘದ ಅಧ್ಯಕ್ಷ ಕೆಂಪರಾಜೇ ಅರಸ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರು ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ  ಮಾಡಿದರು. ದ್ವಿತೀಯ ಪಿಯುಸಿಯಲ್ಲಿ ರ್ಯಾಂಕ್ ಪಡೆದ ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಬಿಜೆಪಿ ಮುಖಂಡ ಎಂ.ಎನ್.ರಮೇಶ್ ಪ್ರದಾನ ಮಾಡಿದರು.

ಪ್ರಾಚೀನ ಮತ್ತು ಪುರಾತತ್ವ ಇಲಾಖೆಯ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್ ಮಾತನಾಡಿ, ನಾಲ್ವಡಿಯವರದು ದೂರದೃಷ್ಟಿಯುಳ್ಳ ನಡೆ. ಸ್ವಾತಂತ್ರ್ಯಕ್ಕೂ ಮುಂಚೆಯೇ ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ ನೀಡಬೇಕೆಂದು ಹಿಂದುಳಿದ ಹಾಗೂ ದಲಿತರಿಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸಿದರು. ಆ ಕಾಲದಲ್ಲಿಯೇ ಪ್ರಜಾಪ್ರತಿನಿಧಿ ಸಭೆಯನ್ನು ಪ್ರಾರಂಭಿಸಿ ಹಿಂದುಳಿದವರಿಗೂ, ದಲಿತರಿಗೂ ಮತದಾನದ ಹಕ್ಕು ಕೊಟ್ಟರು. ಅವರೊಬ್ಬ ಆಧುನಿಕ ಶಿಲ್ಪಿ, ಅವರ ಕೊಡುಗೆ ಅಪಾರ ಮತ್ತು ಅನನ್ಯ. ಅವರ ಜಯಂತಿಯನ್ನು ಪ್ರತಿಯೊಬ್ಬರು ಆಚರಿಸಬೇಕು ಎಂದರು.

ಸಮಾಜ ಸೇವಕ ಡಾ.ರಘುರಾಂ ಕೆ.ವಾಜಪೇಯಿ ಮಾತನಾಡಿ, ನಾಳೆ ಮೈಸೂರು ವಿಶ್ವ ಯೋಗ ದಿನವನ್ನು ಅದ್ಧೂರಿಯಾಗಿ ಗಿನ್ನೀಸ್ ದಾಖಲಿಸಲು ಆಚರಿಸುತ್ತಿದೆ. ಜತೆಗೆ ಮೈಸೂರು ವಿಶ್ವ ಯೋಗ ತಾಣವಾಗಿದೆ ಇದಕ್ಕೆ ಕಾರಣ ನಾಲ್ವಡಿಯರವರು. ನಾಲ್ವಡಿ ಅವರು ಯೋಗಪಟುವಾದ ಕ್ರಷ್ಣಮಾಚಾರ್ಯ ರೊಂದಿಗೆ ಉತ್ತಮ ಒಡನಾಟ ಹೊಂದಿ ಅವರನ್ನು ಪ್ರೋತ್ಸಾಹಿಸಿದ್ದರು ಎಂದರು.

ಮರಿಮಲ್ಲಪ್ಪ ಕಾಲೇಜಿನ ಪ್ರಾಂಶುಪಾಲ ನೀಲಕಂಠ, ಸೇನಾಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸ್ ಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಇತರರು ಉಪಸ್ಥಿತರಿದ್ದರು. (ಕೆ.ಎಸ್, ಎಂ.ಎನ್)

Leave a Reply

comments

Related Articles

error: