Uncategorized

ನಿಗದಿತ ತಪಾಸಣಾ ಸ್ಥಳವಲ್ಲದ ಕಡೆ ಸಾರಿಗೆ ಬಸ್ ತಪಾಸಣೆಗೆ ಮುಂದಾದ ತನಿಖಾಧಿಕಾರಿಯಿಂದ ನಿರ್ವಾಹಕನಿಗೆ ಬೆದರಿಕೆ

ಮೈಸೂರು, ಜೂ.21:- ನಿಗದಿತ ತಪಾಸಣಾ ಸ್ಥಳವಲ್ಲದ ಕಡೆ ಸಾರಿಗೆ ಬಸ್ ತಪಾಸಣೆಗೆ ಮುಂದಾದ ತನಿಖಾಧಿಕಾರಿ ನಿರ್ವಾಹಕನಿಗೆ ಗದರಿಸಿ ತನಿಖೆಗೆ ಸಹಕರಿಸಿಲ್ಲವೆಂದು ಮೇಲಾಧಿಕಾರಿಗಳಿಗೆ ವಿಶೇಷ ವರದಿ ಕಳುಹಿಸುವುದಾಗಿ ಬೆದರಿಸಿದ್ದರಿಂದ ಮನನೊಂದ ನಿರ್ವಾಹಕ ಕರ್ತವ್ಯವನ್ನು ಮೊಟಕುಗೊಳಿಸಿ ಸಾರಿಗೆ ಘಟಕಕ್ಕೆ ಹಿಂದಿರುಗಿ ದೌರ್ಜನ್ಯವೆಸಗಿದ ತನಿಖಾಧಿಕಾರಿ ವಿರುದ್ಧ ಸಂಸ್ಥೆಯ ಮೇಲಾಧಿಕಾರಿಗಳಿಗೆ ದೂರು ನೀಡಿರುವ ಘಟನೆ ಪಿರಿಯಾಪಟ್ಟಣ ಸಾರಿಗೆ ಬಸ್ ನಿಲ್ದಾಣದಲ್ಲಿ ನಡೆದಿದೆ.

ಘಟನೆ ಸಂಬಂಧ ಪಿರಿಯಾಪಟ್ಟಣ ಸಾರಿಗೆ ಘಟಕದ ನಿರ್ವಾಹಕ ಕೆ.ಯೋಗೇಶ್ ಬಿಲ್ಲೆ ಸಂಖ್ಯೆ 1727 ಚಾಲಕ/ನಿರ್ವಾಹಕ ಪತ್ರಿಕಾ ಹೇಳಿಕೆ ನೀಡಿದ್ದು, ಜೂ.19ರ ಮಂಗಳವಾರ ಮಾರ್ಗಸಂಖ್ಯೆ 56ರಲ್ಲಿ ವಾಹನ ಸಂಖ್ಯೆ: ಕೆ.ಎ.09 ಎಫ್4587ರಲ್ಲಿ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ನವಿಲೂರು ಗ್ರಾಮದಿಂದ ಪಿರಿಯಾಪಟ್ಟಣಕ್ಕೆ ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಬರುವಾಗ ಕುಶಾಲನಗರ ಪಿರಿಯಾಪಟ್ಟಣ ಮುಖ್ಯರಸ್ತೆಯಲ್ಲಿ ಬರುವ ಆಲನಹಳ್ಳಿ ಗೇಟ್‍ನಿಂದ ಸುಮಾರು ಒಂದು ಕಿ.ಮೀ. ಹಿಂದೆ ಮಂಗಳೂರು ವಿಭಾಗದ ಸಾರಿಗೆ ತನಿಖಾಧಿಕಾರಿಗಳಾದ ಕುಮಾರ್ ಹಾಗೂ ಕಿರಣ್ ನಾಯಕ್ ನಮ್ಮ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆಗೆ ಮುಂದಾದರು. ಆ ವೇಳೆ ವಾಹನದಲ್ಲಿದ್ದ 47 ಪ್ರಯಾಣಿಕರಿಗೆ ಟಿಕೆಟ್ ವಿತರಿಸಿ 9 ವಿದ್ಯಾರ್ಥಿ ಪಾಸ್‍ಗಳನ್ನು ಪರಿಶೀಲಿಸಿದ್ದೆ. ಅಧಿಕಾರಿ ಕುಮಾರ್ ಅವರಿಗೆ ವಾಹನ ತಪಾಸಣೆಯ ಸ್ಥಳ ಇಲ್ಲಿಂದ ಒಂದು ಕಿ.ಮೀ.ಗೂ ಹೆಚ್ಚು ದೂರದಲ್ಲಿದೆ. ಬಸ್‍ನಲ್ಲಿದ್ದ ಕೆಲವರಿಗೆ ಟಿಕೆಟ್ ವಿತರಣೆ ಮಾಡಬೇಕು ಎಂದು ಹೇಳಿದಾಗ ನನ್ನ ಮಾತನ್ನು ಕೇಳದ ತನಿಖಾಧಿಕಾರಿ ಕುಮಾರ್ ಪ್ರಯಾಣಿಕರೆದುರೇ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ತನಿಖೆಗೆ ಸಹಕರಿಸದ ನೀನು ಇನ್ನು ಮುಂದೆ ಅದು ಹೇಗೆ ಕರ್ತವ್ಯ ನಿರ್ವಹಿಸುತ್ತೀಯ ನೋಡಿಕೊಳ್ಳುತ್ತೇನೆ ಎಂದು ಏರುದನಿಯಲ್ಲಿ ಗದರಿಸಿರುತ್ತಾರೆ. ಈ ವೇಳೆ ನಿಮ್ಮ ಗಲಾಟೆಯಿಂದಾಗಿ ವಾಹನ ನಿಲ್ಲಿಸಿರುವುದರಿಂದ ಶಾಲಾ ಕಾಲೇಜಿಗೆ ನಿಗದಿತ ಸಮಯಕ್ಕೆ ಹೋಗಲು ತೊಂದರೆಯಾಗುತ್ತದೆ ಎಂದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಹೆಚ್ಚು ಮಾತನಾಡಿದರೆ ವಾಹನವನ್ನು ಪೊಲೀಸ್ ಠಾಣೆಗೆ ಕರೆದೊಯ್ದು ನಿಮ್ಮಗಳ ಮೇಲೂ ದೂರು ದಾಖಲಿಸುತ್ತೇನೆ ಎಂದು ಬೆದರಿಸಿರುತ್ತಾರೆ. ಚಾಲಕನ ಲಾಗ್‍ಶೀಟ್ ಪಡೆದು ನಿರ್ವಾಹಕರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಬರೆದು ಹೋಗಿರುವುದಿರಂದ ತುಂಬಾ ಮನನೊಂದಿದ್ದೇನೆ. ತನಿಖಾಧಿಕಾರಿ ಕುಮಾರ್‍ ಸ್ಥಳೀಯರಾಗಿದ್ದು ಮಂಗಳೂರು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಕೆಲ ನಿರ್ವಾಹಕರನ್ನು ವೈಯುಕ್ತಿಕವಾಗಿ ಗುರಿ ಮಾಡಿ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸುತ್ತಿರುವುದರಿಂದ ಅವರ ಮೇಲೆ ಸಂಸ್ಥೆಯ ವಿಭಾಗಾಧಿಕಾರಿ, ಭದ್ರತಾ ನಿರ್ದೇಶಕರು ಹಾಗೂ ಉಸ್ತುವಾರಿ ನಿರ್ದೇಶಕರಿಗೆ ದೂರು ಸಲ್ಲಿಸುತ್ತಿದ್ದೇನೆ. ದಯಮಾಡಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿರುವ ತನಿಖಾಧಿಕಾರಿ ವಿರುದ್ಧ ತನಿಖೆ ನಡೆಸಿ ಸೂಕ್ತ ನ್ಯಾಯ ದೊರಕಿಸಬೇಕೆಂದು ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: