ದೇಶ

ಆಗಸ ಹಾಗೂ ಹಿಮಗಡ್ಡೆಗಳ ನಡುವೆ ಯೋಗ ಪ್ರದರ್ಶಿಸಿದ ಭಾರತೀಯ ಸೈನಿಕರು

ಲಡಾಖ್,ಜೂ.21-ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ದೇಶಾದ್ಯಂತ ಸಾಮೂಹಿಕವಾಗಿ ಯೋಗ ಪ್ರದರ್ಶನ ಮಾಡಲಾಗುತ್ತಿದೆ. ಭಾರತೀಯ ಭೂ, ನೌಕಾ ಹಾಗೂ ವಾಯು ಪಡೆ ಸೈನಿಕರು ಹಿಮಗಡ್ಡೆಗಳ ನಡುವೆ, ಸಮುದ್ರದ ಮಧ್ಯೆ ಯುದ್ಧ ನೌಕೆಯಲ್ಲಿ ಹಾಗೂ ಆಗಸದಲ್ಲಿ ಯೋಗ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.

ಹಿಮಗಡ್ಡೆಗಳ ನಡುವೆ ಯೋಗ: ಭೂ ಸೇನಾ ಪಡೆಯವರು ಬಿಸಿ ರಕ್ತವನ್ನೇ ಹೆಪ್ಪುಗಟ್ಟಿಸುವ ಹಿಮಗಡ್ಡೆಗಳ ನಡುವೆ ಯೋಗ ಮಾಡಿದ್ದಾರೆ. ಸಮುದ್ರ ಮಟ್ಟದಿಂದ ಬರೊಬ್ಬರಿ 18 ಸಾವಿರ ಅಡಿಗಳಷ್ಟು ಮೇಲಿರುವ ಇಂಡೋ-ಟಿಬೆಟಿಯನ್ ಗಡಿಯಲ್ಲಿ ಕರ್ತವ್ಯನಿರತರಾಗಿದ್ದ ಸುಮಾರು 30ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳು ಯೋಗ ಪ್ರದರ್ಶನ ಮಾಡಿದರು. ಐಟಿಬಿಪಿಯ ಸುಮಾರು 30ಕ್ಕೂ ಹೆಚ್ಚು ಯೋಧರು ಯೋಗ ಮಾಡುವ ವಿಡಿಯೋ ಇದೀಗ ವೈರಲ್ ಅಗಿದೆ.

ಅಂತೆಯೇ ಇತ್ತ ಕೊರೆವ ಚಳಿಯಲ್ಲೇ ಅರುಣಾಲ ಪ್ರದೇಶದ ಲೋಹಿತ್ ಪುರದಲ್ಲಿರುವ ಇಂಡೋ-ಟಿಬೆಟ್ ಗಡಿಯಲ್ಲಿನ ದಿಗರು ನದಿಯಲ್ಲಿ ಐಟಿಬಿಪಿಯ ಸುಮಾರು 20ಕ್ಕೂ ಅಧಿಕ ಯೋಧರು ನದಿ ಯೋಗ ಪ್ರದರ್ಶನ ಮಾಡಿದರು. ಅತ್ಯಂತ ಚಳಿಯ ನಡುವೆಯೇ ಸೈನಿಕರು ಮಾಡಿದ ಯೋಗ ವಿಶೇಷವಾಗಿತ್ತು.

ಆಗಸದಲ್ಲಿ ಯೋಗ ಪ್ರದರ್ಶನ: ವಾಯುಪಡೆ ಯೋಧರು ಆಗಸದಲ್ಲಿ ಯೋಗ ಪ್ರದರ್ಶನ ಮಾಡಿದ್ದಾರೆ. ಭಾರತೀಯ ವಾಯು ಪಡೆಯ ಪ್ಯಾರಾಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್ ನ ತರಬೇತುದಾರರಾದ ಸ್ಯಾಮಲ್ ಹಾಗೂ ಗಜಾನಂದ್ ಯಾದವ್ ಅವರು ಆಕಾಶದಲ್ಲಿ ಯೋಗಾಸನ ಪ್ರದರ್ಶಿಸಿದರು. ಸುಮಾರು 15 ಸಾವಿರ ಅಡಿ ಮೇಲೆ ಯೋಧರು ವಾಯು ನಮಸ್ಕಾರ ಮತ್ತು ಪದ್ಮಾಸನ ಹಾಕುವ ಮೂಲಕ ಯೋಗ ದಿನಾಚರಣೆ ಆಚರಿಸಿದರು.

ಈ ಸಾಹಸದ ಯೋಗವನ್ನು ವಾಯುಸೇನೆ ತನ್ನ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ಅವರ ಫೋಟೋ ಕೆಳಗೆ `ಇದು ಉತ್ತಮ ಆರೋಗ್ಯ, ಸಂತೋಷ, ಸಾಮರಸ್ಯ ಮತ್ತು ಐಎಎಫ್ ಏರ್ ವಾರಿಯರ್ ಶಾಂತಿಯ ಸಂದೇಶ. ಆಕಾಶದಲ್ಲಿ ಯೋಗಾಭ್ಯಾಸ ಮಾಡುತ್ತಿರುವ ಭಾರತೀಯ ವಾಯುಪಡೆಯ ಪ್ಯಾರಾಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್ ನ ತರಬೇತುದಾರರು’ ಎಂದು ಬರೆದು ಐಎಎಫ್ ಟ್ವಿಟ್ ಮಾಡಿದೆ.

ಇನ್ನು ಕೇರಳ, ವಿಶಾಖಪಟ್ಟಣಂದಲ್ಲಿ ಭಾರತೀಯ ನೌಕಾಪಡೆಯ ಸೈನಿಕರು ಯುದ್ಧನೌಕೆಯಲ್ಲೇ ಯೋಗ ಪ್ರದರ್ಶನ ಮಾಡಿದರು. (ಎಂ.ಎನ್)

Leave a Reply

comments

Related Articles

error: