
ಕರ್ನಾಟಕಪ್ರಮುಖ ಸುದ್ದಿ
ಕರ್ನಾಟಕದಲ್ಲಿ ಪಂಜಾಬ್ ಮಾದರಿ ಸಾಲಮನ್ನಾ: ಸಂಸದ ವೀರಪ್ಪ ಮೊಯಿಲಿ
ಬೆಂಗಳೂರು (ಜೂನ್ 21): ಕರ್ನಾಟಕದಲ್ಲಿ ಪಂಜಾಬ್ ರಾಜ್ಯದ ಮಾದರಿಯಲ್ಲಿ ಸಾಲಮನ್ನಾ ಮಾಡಲು ನಿರ್ಣಯ ಕೈಗೊಳ್ಳಲಾಗಿದ್ದು ಈ ಬಗ್ಗೆ ತೆಗೆದುಕೊಳ್ಳಬೇಕಾಗಿರುವ ಮುಂದಿನ ಕ್ರಮಗಳಿಗಾಗಿ ಕರಡು ಪ್ರತಿಯನ್ನೂ ಸಿದ್ಧಪಡಿಸಲಾಗಿದೆ ಎಂದು ಸಂಸದ ಹಾಗೂ ಕಾಂಗ್ರೆಸ್ ನಾಯಕ ವೀರಪ್ಪ ಮೊಯಿಲಿ ಅವರು ಹೇಳಿದ್ದಾರೆ.
ನಿನ್ನೆ ರಾತ್ರಿ ಒಂದುವರೆ ಗಂಟೆಗಳ ಸಮಯ ನಡೆದ ಸುಧೀರ್ಘ ಸಮನ್ವಯ ಸಮಿತಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ನಲ್ಲಿ ಸಾಲಮನ್ನಾ ಯಶಸ್ವಿಯಾಗಿದೆ. ಇಲ್ಲಿಯೂ ಅದೇ ರೀತಿಯ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎಂದರು.
ಕಾಂಗ್ರೆಸ್-ಜೆಡಿಎಸ್ ಪ್ರಣಾಳಿಕೆಯ ಪ್ರಥಮ ಕರಡುಪ್ರತಿಯೂ ಸಹ ಸಿದ್ಧವಾಗಿದ್ದು ಬಜೆಟ್ನಲ್ಲಿ ಘೋಷಣೆಗಳು ಹೊರಬೀಳಲಿವೆ ಎಂಬ ಸುಳಿವನ್ನು ವೀರಪ್ಪ ಮೋಯ್ಲಿ ನೀಡಿದ್ದಾರೆ. ಮೊದಲ ಹಂತದಲ್ಲಿ ಸಹಕಾರಿ ವಲಯದಲ್ಲಿ ರೈತರು ಮಾಡಿರುವ 9 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಬಗ್ಗೆ ಚಿಂತನೆ ನಡೆದಿದ್ದು ಇದರಿಂದ 40 ಲಕ್ಷ ರೈತರು ಅನುಕೂಲ ಪಡೆಯಲಿದ್ದಾರೆ ಎಂದು ಅವರು ಹೇಳಿದರು.
ಹಿರಿಯ ನಾಗರಿಕರಿಗೆ 6 ಸಾವಿರ ಮಾಸಾಶನ ನೀಡುವ ಬಗ್ಗೆ ಜೆಡಿಎಸ್ನಲ್ಲಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಇನ್ನಷ್ಟು ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಮೊಯ್ಲಿ ಅವರು ತಿಳಿಸಿದರು. (ಎನ್.ಬಿ)