ಕರ್ನಾಟಕಪ್ರಮುಖ ಸುದ್ದಿ

ಎಲ್ಲ ಶಾಲೆಗಳಲ್ಲಿ ಯೋಗ ಕಲಿಸುವಂತೆ ಮಾಜಿ ಪ್ರಧಾನಿ ದೇವೇಗೌಡರ ಸಲಹೆ

ಬೆಂಗಳೂರು (ಜೂನ್ 21): ಎಲ್ಲ ಶಾಲೆಗಳಲ್ಲಿ ಯೋಗ ಆಚರಣೆಯನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಲಹೆ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಯೋಗ ಪ್ರದರ್ಶನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗ ಮತ್ತು ವ್ಯಾಯಾಮಗಳನ್ನು ಶಾಲೆಗಳಲ್ಲಿ ಜಾರಿಗೆ ತರುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಆದರೆ, ಬೆಂಗಳೂರಿನ ಕೆಲವು ಶಾಲೆಗಳಲ್ಲಿ ವ್ಯಾಯಾಮ ಮಾಡಲು ಆಟದ ಮೈದಾನಗಳೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಹೊಸ ಶಾಲೆಗಳನ್ನು ಆರಂಭಿಸುವಾಗ ಕಡ್ಡಾಯವಾಗಿ ಆಟದ ಮೈದಾನವನ್ನು ಒದಗಿಸಬೇಕು ಎಂದೂ ಅವರು ಸಲಹೆ ನೀಡಿದರು.

ಮಹಾತ್ಮಗಾಂಧೀಜಿ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಸೇರಿದಂತೆ ಮಹಾಪುರುಷರೆಲ್ಲರೂ ಕೂಡ ಯೋಗ ಸಾಧಕರಾಗಿದ್ದರು. ಕ್ಯಾನ್ಸರ್, ಹೃದಯ ಸಂಬಂಧಿ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಯೋಗಾಭ್ಯಾಸದಿಂದ ಕೊಂಚ ಪರಿಹಾರ ಸಿಗುಬಹುದು ಎಂದು ಅಭಿಪ್ರಾಯಪಟ್ಟರು.

ನಾನು 23ನೇ ವಯಸ್ಸಿನಲ್ಲಿ ಕಂಟ್ರಾಕ್ಟರ್ ಕೆಲಸ ಶುರು ಮಾಡಿದ್ದು, ಆಗ ಬೆಳಗ್ಗೆ 5ರಿಂದ ಸೈಕಲ್ ತುಳಿಯುತ್ತಿದ್ದೆ. 70ರಿಂದ 80 ಕಿ.ಮಿ. ಸೈಕಲ್ ತುಳಿಯುತ್ತಿದ್ದೆ. ಇದಕ್ಕಿಂತ ವ್ಯಾಯಾಮ ಬೇಕೆ ಎಂದು ಪ್ರಶ್ನಿಸಿದರು. ಮೊದಲಿನಿಂದಲೂ ತಾವು ಶ್ರಮ ಜೀವಿಯಾಗಿದ್ದು, ಮಿತ ಆಹಾರ ಸೇವಿಸುವುದು ನಮ್ಮ ಆರೋಗ್ಯದ ಗುಟ್ಟು ಎಂದರು. (ಎನ್.ಬಿ)

Leave a Reply

comments

Related Articles

error: