ಪ್ರಮುಖ ಸುದ್ದಿಮೈಸೂರು

‘ಅಸಿಕಾನ್’ 76ನೇ ಶಸ್ತ್ರ ಚಿಕಿತ್ಸಕರ ಬೃಹತ್ ಸಮಾವೇಶ ಡಿ.14 ರಿಂದ 18 ರ ವರೆಗೆ

  • ಶಸ್ತ್ರ ಚಿಕಿತ್ಸೆಗಳ ನೇರ ಪ್ರಸಾರ
  • ತಜ್ಞರೊಂದಿಗೆ ಸಂವಾದ
  • ವೈದ್ಯಕೀಯ ವಸ್ತು ಪ್ರದರ್ಶನ

ಮೈಸೂರಿನಲ್ಲಿ ಅಖಿಲ ಭಾರತ ಶಸ್ತ್ರ ಚಿಕಿತ್ಸಕರ ಅಸೋಸಿಯೇನ್‍ನ ‘ಅಸಿಕಾನ್’ 76ನೇ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನಾ ಕಾರ್ಯದರ್ಶಿ ಹಾಗೂ ಸಿಗ್ಮಾ ಆಸ್ಪತ್ರೆಯ ಡಾ. ಜಿ. ಸಿದ್ದೇಶ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅವರು ಪರ್ತಕರ್ತರ ಭವನದಲ್ಲಿ ಮಾತನಾಡಿ ಡಿ.14 ರಿಂದ 18ರ ವರೆಗೆ ಐದು ದಿನಗಳ ಕಾಲ ಕರ್ನಾಟಕ ಮುಕ್ತ ವಿವಿಯ ಆವರಣದಲ್ಲಿ ಸಮಾವೇಶ ಜರುಗಲಿದ್ದು, ಕರ್ನಾಟಕ ಶಸ್ತ್ರ ಚಿಕಿತ್ಸಕರ ಅಸೋಸಿಯೇಷನ್ ಮತ್ತು ಮೈಸೂರು ಸರ್ಜಿಕಲ್ ಸೊಸೈಟಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದಾರೆ. ದೇಶದಾದ್ಯಂತ ಸುಮಾರು 4 ರಿಂದ 5 ಸಾವಿರ ಜನ ತಜ್ಞ ಶಸ್ತ್ರ ಚಿಕಿತ್ಸಕರು ಪಾಲ್ಗೊಳ್ಳುವರು, ಅಲ್ಲದೇ ಸಾರ್ಕ್ ರಾಷ್ಟ್ರಗಳ ವೈದ್ಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಕೇವಲ ಮೇಟ್ರೊ ಸಿಟಿಗಳಲ್ಲಿಯೇ ನಡೆಯುವ ಸಮಾವೇಶವನ್ನು 19 ವರ್ಷಗಳ ನಂತರ ಕರ್ನಾಟಕದಲ್ಲಿ ಆಯೋಜಿಸಲಾಗುತ್ತಿದ್ದು ಮೈಸೂರಿನಲ್ಲಿ ನಡೆಯುತ್ತಿರುವುದು ವಿಶೇಷ ಎಂದರು. ಇದರ ಯಶಸ್ವಿಗಾಗಿ ಒಂದೂವರೆ ವರ್ಷದಿಂದಲೂ ತಂಡವೂ ಶ್ರಮಿಸುತ್ತಿದ್ದು ಬಂದ ಅತಿಥಿಗಳ ವಸತಿಗಾಗಿ ನಗರದ ಹೋಟೆಲ್‍ಗಳಲ್ಲಿ, ವಸತಿ ಸಮುಚ್ಚಯಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ನೇರ ಪ್ರಸಾರ: ಡಿ.14ರಂದು ಸರಳ ಶಸ್ತ್ರ ಚಿಕಿತ್ಸೆಗಳಿಂದ ಹಿಡಿದು ಉನ್ನತ ತಂತ್ರಜ್ಞಾನವನ್ನೊಳಗೊಂಡ ಚಿಕಿತ್ಸೆಗಳನ್ನು ದೇಶದಾದ್ಯಂತ 6 ಆಸ್ಪತ್ರೆಗಳಲ್ಲಿ ನಡೆಯಲಿದ್ದು ಹೈದ್ರಾಬಾದ್‍ನ ಏಷಿಯನ್ ಇನ್‍ಸ್ಟಿಟ್ಯೂಟ್ ಆಫ್ ಗ್ಯಾಸ್ಟೋಲಾಜಿ, ಮುಂಬೈನ ಕೋಕಿಲಬೇಹನ್ ಅಂಬಾನಿ ಆಸ್ಪತ್ರೆಯಲ್ಲಿ ರೋಬೋಟ್‍ ಶಸ್ತ್ರ ಚಿಕಿತ್ಸೆ, ಅದರಂತೆ ನವದೆಹಲಿಯ ಇಂದ್ರಪ್ರಸ್ಥ ಅಪೋಲೋ , ಬೆಂಗಳೂರಿನ ಹಾಗೂ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯ ತಜ್ಞರು ಶಸ್ತ್ರ ಚಿಕಿತ್ಸೆಯನ್ನು ನೇರ ಪ್ರಸಾರದ ಮೂಲಕ ಮಾಡಿ ತೋರಿಸುವರು ಎಂದು ತಿಳಿಸಿದರು.

ಡಿ.15ರಂದು ಸಂಜೆ 6ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಮತ್ತು ಮೈಸೂರು ವಿವಿಯ ಕುಲಪತಿ ಡಾ.ಕೆ.ಎಸ್.ರಂಗಪ್ಪ ಉಪಸ್ಥಿತರಿರುವರು ಎಂದು ಸಂಘಟನಾ ಕಾರ್ಯದರ್ಶಿ ಪ್ರೊ.ಡಾ.ಶರತ್‍ಚಂದ್ರ ತಿಳಿಸಿದರು.

ಡಾ.ಸರ್ವೇಶ್ ರಾಜ್ ಅರಸ್‍ ಅವರು ಮಾತನಾಡಿ, ಈ ಸಂದರ್ಭದಲ್ಲಿ ಹಿರಿಯ ಶಸ್ತ್ರ ಚಿಕಿತ್ಸಕರಾದ ಡಾ. ಅಸೋಪ ಹಾಗೂ ಪದ್ಮಶ್ರೀ ಡಾ. ಆರ್.ಬಿ. ಪಾಟೀಲ್ ಅವರ ಜೀವಮಾನ ಪ್ರಶಸ್ತಿ ಹಾಗೂ ಇತರ 35 ಶಸ್ತ್ರ ಚಿಕಿತ್ಸಕರನ್ನು ಸನ್ಮಾನಿಸಲಾಗುವುದು. ವಿವಿಧ ಶಸ್ತ್ರಚಿಕಿತ್ಸಕರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಮಂಡಿಸಿರುವ ವಿವಿಧ ವಿಷಯಗಳನ್ನೊಳಗೊಂಡ 1200 ಪ್ರಬಂಧಗಳನ್ನು ಬಿಡುಗಡೆಗೊಳಿಸಲಾಗುವುದು. ಇದೇ ಸಂದರ್ಭದಲ್ಲಿ ನಗರದ ಹಾಗೂ ರಾಜ್ಯದ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಾಮಾನ್ಯ ಶಸ್ತ್ರ ಚಿಕಿತ್ಸೆ, ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ, ಯುರೋಲಾಜಿ, ಎಂಡೋಕ್ರೋಲಾಜಿ ವಿಶೇಷ ತಜ್ಞರ ಉಪನ್ಯಾಸವಿರುವುದು. ದೇಶದ ಹಲವಾರು ಔಷಧಿ ತಯಾರಕರು ಹಾಗೂ ವೈದ್ಯಕೀಯ ಉಪಕರಣಗಳ ತಯಾರಕರ ವೈದ್ಯಕೀಯ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಡಾ.ಸಿ.ಪಿ.ಮಧು ಮಾತನಾಡಿದರು.

Leave a Reply

comments

Related Articles

error: