ಪ್ರಮುಖ ಸುದ್ದಿಮೈಸೂರು

ಮೋದಿ ಅಧಿಕಾರಕ್ಕೆ ಬರದಿದ್ದಲ್ಲಿ ದೇಶದ ಗತಿ ಏನಾಗುತ್ತದೆ ಎಂಬುದನ್ನು ಯೋಚನೆ ಮಾಡಲು ಸಾಧ್ಯವಿಲ್ಲ : ಡಾ.ಸಾಹಿತಿ ಎಸ್.ಎಲ್ ಭೈರಪ್ಪ

ಮೈಸೂರು,ಜೂ.22:- ಒಂದೇ ಸಮನೆ ದೇಶದ ಹಿತಕ್ಕೋಸ್ಕರ ತಮ್ಮನ್ನು ತಾನು ತೊಡಗಿಸಿಕೊಳ್ಳುವ, ದೇಶದ ಹಿತ ದೃಷ್ಟಿಯಿಂದ ಆಲೋಚನೆ ಮಾಡುವ ಮೋದಿಯಂತಹ ಪ್ರಧಾನಿ ಈ ಮೊದಲು ಭಾರತ ದೇಶದೊಳಗೆ ಬಂದಿಲ್ಲ ಎಂದು ಹಿರಿಯ ಸಾಹಿತಿ ಡಾ. ಎಸ್.ಎಲ್ ಭೈರಪ್ಪ ಅಭಿಪ್ರಾಯಪಟ್ಟರು.

ಕುವೆಂಪುನಗರದಲ್ಲಿನ ಅವರ ನಿವಾಸದಲ್ಲಿಂದು ಕೇಂದ್ರ ಸರ್ಕಾರದ ಸಾಧನ ವಿವರವುಳ್ಳ  ಪುಸ್ತಕದ ಪ್ರತಿಯನ್ನು ಅರ್ಪಿಸುವ ಸಂಸದ ಪ್ರತಾಪ್ ಸಿಂಹ ಅವರ ಕಾರ್ಯಕ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು 1931ರಲ್ಲಿ ಹುಟ್ಟಿದ್ದು, ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನನಗೆ 16ವರ್ಷ. ಆಗಿನಿಂದ ಅದಕ್ಕೂ ಮೊದಲು ಹಳ್ಳಿ ಸುತ್ತಿ ರಾಜಕೀಯ ಹೇಗೆ ನಡೆಯುತ್ತಿದೆ ಎಂಬುದನ್ನು ಬಲ್ಲೆ. ಆಗಿನಿಂದಲೇ ದಿನಕ್ಕೆ ನಾಲ್ಕು ದಿನಪತ್ರಿಕೆ ಓದುವ ಅಭ್ಯಾಸ. ಆದರೆ ನರೇಂದ್ರ ಮೋದಿಯಂತಹ ಪ್ರಧಾನಿ ಭಾರತದೇಶದೊಳಕ್ಕೆ ಬಂದಿಲ್ಲ. ಅವರಷ್ಟೇ ಬುದ್ಧಿವಂತರಿರಬಹುದು. ಆದರೆ ಆ ರೀತಿ ಕೆಲಸ ಮಾಡುವವರನ್ನು ನಾನು ನೋಡಿಲ್ಲ. ಒಂದೇ ಸಮ ದೇಶದ ಹಿತಕ್ಕೆ ತಮ್ಮನ್ನು ತಾನು ತೊಡಗಿಸಿಕೊಳ್ಳುವಂತಹ, ದೇಶದ ಹಿತದೃಷ್ಟಿಯಿಂದ ಆಲೋಚನೆ ಮಾಡುವಂಥಹವರು ಯಾರೂ ಬಂದಿಲ್ಲ ಎಂದರು.ಅವರು ಅಧಿಕಾರಕ್ಕೆ ಬಂದ ನಾಲ್ಕೇ ವರ್ಷದಲ್ಲಿ ಎಷ್ಟು ಕೆಲಸ ಮಾಡಿದ್ದಾರೆ. ಭಾರತದ ಕುರಿತು ಜಗತ್ತಿನ ಎಲ್ಲ ರಾಷ್ಟ್ರಗಳಿಗಿದ್ದ ಮನೋಭಾವವನ್ನೇ ಬದಲಾಯಿಸಿದ್ದಾರೆ. ಭಾರತದ ಭವಿಷ್ಯದ ಬಗ್ಗೆ ಯೋಚಿಸಿ ಕೆಲಸ ಮಾಡುತ್ತಿದ್ದಾರೆ. ಇನ್ನೆರಡ್ಮೂರು ಟರ್ಮ್ ಗೆ ಮೋದಿಯವರನ್ನು ಗೆಲ್ಲಿಸದಿದ್ದರೆ ಅವಿವೇಕವಾಗತ್ತೆ ಎಂದರು. ನಮ್ಮಲ್ಲಿ ನಾಲ್ಕಾರು ಗುಂಪು ಸೇರಿದ್ದಾರೆ. ಅವರ ಉದ್ದೇಶ ಒಂದೇ ಮೋದಿ ಸೋಲಿಸಿ. ಮೋದಿ ಸೋಲಿಸಿ ಆಮೇಲೆನ್ಮಾಡ್ತೀರಾ ? ಅದಕ್ಕೆ ಯಾರಲ್ಲಿಯೂ ಉತ್ತರವಿಲ್ಲ. ಆ ಮಟ್ಟಕ್ಕೆ ಇಳಿದು ಕೆಲಸ ಮಾಡುತ್ತೇವೆ ಎನ್ನುವವರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈವಾಗ ನೋಡಿ ಸಮ್ಮಿಶ್ರ ಸರ್ಕಾರ. ಸಿಕ್ಕಿದವರಿಗೆ ಸೀರುಂಡೆ. ಮೋದಿ ಗೆಲ್ಲಿಸದಿದ್ದರೆ ಇದೇ ತರ ಸಮ್ಮಿಶ್ರ ಸರ್ಕಾರ. ಆಗ ದೇಶದ ಗತಿ ಏನಾಗುತ್ತದೆ ಎಂಬುದನ್ನು ಯೋಚನೆ ಮಾಡಲೂ ಸಾಧ್ಯವಿಲ್ಲ. ಆದ್ದರಿಂದ ಮೋದಿಯವರು ಸಾಕಷ್ಟು ಬಹುಮತದಿಂದ ಗೆಲ್ಲಬೇಕು. ಮತ್ತೆ ಕೆಲಸ ಮಾಡಬೇಕು. ಈಗ ಟೇಕಾಫ್ ಆಗಿದ್ದು, ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಮುಂದೆಯೂ ಚೆನ್ನಾಗಿ ನಡೆಯಬೇಕು. 1924, 1929ರಲ್ಲಿಯೂ ಮೋದಿಯೇ ಅಧಿಕಾರಕ್ಕೆ ಬರಬೇಕು ಎಂಬ ಆಶಯ ವ್ಯಕ್ತಪಡಿಸಿದರಲ್ಲದೇ, ಮೋದಿ ಅಧಿಕಾರಕ್ಕೆ ಬರದಿದ್ದರೆ ಅವಿವೇಕದ ಕೆಲಸವಾಗಲಿದೆ. ಜನರು ಎಚ್ಚೆತ್ತುಕೊಳ್ಳಿ, ವಿದ್ಯಾವಂತರು ಹಳ್ಳಿ ಹಳ್ಳಿಗೆ ಹೋಗಿ ಜನರು ಎಚ್ಚೆತ್ತುಕೊಳ್ಳುವ ಕೆಲಸವನ್ನು ಮಾಡಿ ಎಂದು ತಿಳಿಸಿದರು. ಸ್ವಿಸ್ ಬ್ಯಾಂಕಿನಿಂದ ಹಣ ತರಲಿಲ್ಲ ಎಂಬ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ಸ್ವಿಸ್ ಬ್ಯಾಂಕಿನಿಂದ ಹಣ ತರಲು ಏನೆಲ್ಲ ತೊಂದರೆಗಳಿವೆ ಎಂಬುದು ಎಲ್ಲರಿಗೂ ಗೊತ್ತು. ಎಲೆಕ್ಷನ್ ಟೈಮಲ್ಲಿ ಹೇಳಿದ ಸಣ್ಣ ವಾಕ್ಯವನ್ನೇ ಹಿಡಿದು ಮಾತಾಡುವುದರಲ್ಲಿ ಅರ್ಥವಿಲ್ಲ. ಈಗ ಅವರು ಸ್ವಿಸ್ ಬ್ಯಾಂಕ್ ಗೆ ಹೋಗುವ ಎಷ್ಟೋ ಹಣವನ್ನು ತಡೆದಿದ್ದಾರೆ. ಅವರು ಕ್ವಿಕ್ ಆಗಿ ಕೆಲಸ ಮಾಡುತ್ತಾರೆ. ಬಡ ಹೆಣ್ಣು ಮಗಳೋರ್ವಳು ತಾನು ಓದಬೇಕು. ಆದರೆ ಪರಿಸ್ಥಿತಿ ಚೆನ್ನಾಗಿಲ್ಲವೆಂದರೆ ತಕ್ಷಣ ಅದಕ್ಕೆ ಸ್ಪಂದಿಸುತ್ತಾರೆ. ಮೀಟಿಂಗ್ ಹೋಗೋರು ಕೂಡ ಭ್ರಷ್ಟಾಚಾರ ಮಾಡೋದಕ್ಕೆ ಸಾಧ್ಯವಿಲ್ಲ. ಟಿ.ಎ ಬಿಲ್ ಕೂಡ ಖಾತೆಗೆ ಜಮಾ ಆಗತ್ತೆ. ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು. ವಿಮಾನಲ್ಲಿ ವಿದೇಶಕ್ಕೆ ಹೋಗುತ್ತಾರೆ ಎಂದು ಆಡಿಕೊಳ್ಳುತ್ತಾರೆ. ಆದರೆ ಅವರೇನು ಡ್ಯಾನ್ಸ್ ಮಾಡಕಾ ಹೋಗ್ತಾರೆ? ಚೀನಾ ದೇಶದ ಸುತ್ತಮುತ್ತಲಿನ ದೇಶಗಳ ಜೊತೆ ಸ್ನೇಹ ಬೆಳೆಸಿ ಚೀನಾಕ್ಕೆ ಭಯ ಹುಟ್ಟಿಸಿರುವುದು ಕಡಿಮೆನಾ? ಆದರೆ ಕಳೆದ ಹತ್ತು ವರ್ಷ ಅಧಿಕಾರದಲ್ಲಿದ್ದ ಯುಪಿಎ ಪ್ರಧಾನಿಯವರ ಶಕ್ತಿ ಏನಿತ್ತು? ಪ್ರತಿಯೊಂದಕ್ಕೂ ಮೇಡಂ ಕೇಳಿಕೊಂಡು ಬರಲು ಹೋಗುತ್ತಿದ್ದರು ಎಂದು ವ್ಯಂಗ್ಯವಾಡಿದರು. ಮೋದಿಯವರು ಹೊಸತನದ ಕಲ್ಪನೆಯನ್ನು ಕೊಟ್ಟಿದ್ದಾರೆ. ಅದನ್ನು ಬಳಸಿಕೊಳ್ಳಬೇಕು ಎಂದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಗಣ್ಯರಿಗೆ ಮೋದಿ ಸರ್ಕಾರದ ಸಾಧನೆಯನ್ನು ತಿಳಿಸುವ ಪುಸ್ತಕದ ಪ್ರತಿಯನ್ನು ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ್ದು,ಅದರಂತೆ ನಾವೂ ಕೂಡ ಇತ್ತೀಚೆಗೆ ಸುತ್ತೂರು ಶ್ರೀಗಳಿಗೆ ಮತ್ತು ಮೈಸೂರು ರಾಜಮಾತೆಗೆ ಕೇಂದ್ರ ಸರ್ಕಾರದ ಸಾಧನೆ ತಿಳಿಸುವ ಪುಸ್ತಕದ ಪ್ರತಿ ನೀಡಿದ್ದೇವೆ. ಇವತ್ತು ಸಾಹಿತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿಗಳಿಸಿದ ಎಸ್.ಎಲ್.ಭೈರಪ್ಪ ಅವರಿಗೆ ನೀಡಿದ್ದೇವೆ. ಅವರು ಪ್ರಧಾನಿ ಮೋದಿಯವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಎಂದರು. ಡಿಸೆಂಬರ್ ನಲ್ಲಿನ ಉಡಾನ್ ಕುರಿತ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ ಉಡಾನ್ 3 , ‘ಉಡೆ ದೇಶ್ ಕಾ ಆಮ್ ನಾಗರಿಕ್’ ದಲ್ಲಿ ಮೈಸೂರಿಗೆ ಹೆಚ್ಚಿನ ಫ್ಲೈಟ್ ತರುವ ವ್ಯವಸ್ಥೆಯಾಗಲಿದೆ ಎಂದರು.  ಈ ಸಂದರ್ಭ ಶಾಸಕ ನಾಗೇಂದ್ರ, ನಗರಪಾಲಿಕೆ ಸದಸ್ಯ ಮಾ.ವಿ.ರಾಂಪ್ರಸಾದ್ ಮತ್ತಿತರರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: