ಕ್ರೀಡೆ

ಏಕದಿನ ಕ್ರಿಕೆಟ್ ನಲ್ಲಿ ಎರಡು ಹೊಸ ಚೆಂಡುಗಳ ಬಳಕೆ: ಆತಂಕ ವ್ಯಕ್ತಪಡಿಸಿದ ಸಚಿನ್ ತೆಂಡೂಲ್ಕರ್, ವಕಾರ್ ಯೂನಿಸ್

ಮುಂಬೈ,ಜೂ.22-ಏಕದಿನ ಕ್ರಿಕೆಟ್ ನಲ್ಲಿ ಎರಡು ಹೊಸ ಚೆಂಡುಗಳನ್ನು ಬಳಸುವ ಬಗ್ಗೆ ವೆಸ್ಟ್ ಇಂಡಿಸ್ ದಂತಕತೆ ಮೈಕಲ್ ಹೋಲ್ಡಿಂಗ್ಸ್ ಕಳವಳ ವ್ಯಕ್ತಪಡಿಸಿದ ಬಳಿಕ ಇದೀಗ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹಾಗೂ ಪಾಕಿಸ್ತಾನದ ಮಾಜಿ ವೇಗಿ ವಕಾರ್ ಯೂನಿಸ್ ಆತಂಕ ವ್ಯಕ್ತಪಡಿಸಿದ್ದಾರೆ.

ಎರಡು ಹೊಸ ಚೆಂಡುಗಳ ಬಳಕೆಯಿಂದಾಗಿ ಡೆತ್ ಓವರ್ ಗಳಲ್ಲಿ ರಿವರ್ಸ್ ಸ್ವಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಬೌಲರ್ ಗಳ ಮಾರಣಹೋಮ ನಡೆಯುತ್ತಿದೆ ಎಂದು ಸಚಿನ್ ತೆಂಡುಲ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯವಾದ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಪಂದ್ಯವನ್ನು ಉದ್ದೇಶಿಸಿ ಟ್ವಿಟ್ ಮಾಡಿರುವ ಸಚಿನ್, ಎರಡು ಹೊಸ ಚೆಂಡುಗಳೊಂದಿಗೆ ಕ್ರಿಕೆಟ್ ಆಡುವುದು ಏಕದಿನ ಪಂದ್ಯಗಳ ವಿನಾಶಕ್ಕೆ ಎಡೆ ಮಾಡಿಕೊಡುತ್ತದೆ. ಒಂದು ಕಾಲದಲ್ಲಿ ಡೆತ್ ಓವರ್ ಗಳಲ್ಲಿ ಅವಿಭಾಜ್ಯ ಅಂಗವಾಗಿದ್ದ ರಿವರ್ಸ್ ಸ್ವಿಂಗ್ ಅನ್ನು ಈಗ ಕಾಣುವುದೇ ಅಪರೂಪವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಚಿನ್ ಮಾತಿಗೆ ಸಹಮತ ವ್ಯಕ್ತಪಡಿಸಿರುವ ಪಾಕಿಸ್ತಾನದ ಮಾಜಿ ವೇಗಿ ವಕಾರ್ ಯೂನಿಸ್, ಈ ಕಾರಣಕ್ಕಾಗಿಯೇ ವೇಗದ ಬೌಲರ್ ಸೃಷ್ಟಿಯಾಗುತ್ತಿಲ್ಲ. ನಿಮ್ಮ ಮಾತುಗಳನ್ನು ಒಪ್ಪುತ್ತೇನೆ ಸಚಿನ್. ರಿವರ್ಸ್ ಸ್ವಿಂಗ್ ಬಹುತೇಕ ನಿರ್ನಾಮವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಸಚಿನ್ ಹಾಗೂ ವಕಾರ್ ಗಿಂತ ಮೊದಲೇ 2015ರಲ್ಲಿ ಮೈಕಲ್ ಹೋಲ್ಡಿಂಗ್ಸ್ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯು ಎರಡು ತುದಿಯಿಂದ ಹೊಸ ಚೆಂಡು ಬಳಸಲು ಅವಕಾಶ ನೀಡಿದೆ. ಈ ನಿಯಮ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಬೌಲರ್ ಗಳು ಸಾಕಷ್ಟು ದಂಡನೆಗೊಳಗಾಗುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ನಷ್ಟಕ್ಕೆ 481 ರನ್ ಬಾರಿಸಿದ್ದೇ ಸಾಕ್ಷಿ. (ಎಂ.ಎನ್)

 

Leave a Reply

comments

Related Articles

error: