ಮೈಸೂರು

13ನೇ ವಾರ್ಡಿನಾದ್ಯಂತ ಪಾದಯಾತ್ರೆ ನಡೆಸಿ ಸಮಸ್ಯೆ ಆಲಿಸಿದ ಶಾಸಕ ರಾಮದಾಸ್

ಮೈಸೂರು,ಜೂ.22:-  ಕೃಷ್ಣರಾಜ ಕ್ಷೇತ್ರದ ಶಾಸ, ಮಾಜಿ ಸಚಿವ ಎಸ್ ಎ ರಾಮದಾಸ್ ಕೃಷ್ಣರಾಜ ಕ್ಷೇತ್ರದ 13 ನೇ ವಾರ್ಡಿನಾದ್ಯಂತ ಪಾದಯಾತ್ರೆ ಮೂಲಕ ತೆರಳಿ ಜನರ ಕುಂದು ಕೊರತೆ ಆಲಿಸಿ ಸಮಸ್ಯೆ ಬಗೆ ಹರಿಸುವ ಕಾರ್ಯವನ್ನು ಪ್ರಾರಂಭಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಅವರು  ಅತಿ ಹೆಚ್ಚು ಬಹು ಮತ ಕೊಟ್ಟಂತಹ ವಾರ್ಡಿನಿಂದ ಪಾದ ಯಾತ್ರೆ ಮಾಡುತ್ತೇನೆ ಎಂದು ಹೇಳಿದ್ದೆ. ಅದೇ ರೀತಿಯಲ್ಲಿ ಇಂದು ಅತಿ ಹೆಚ್ಚು ಮತ ನೀಡಿರುವ ಬೂತ್ ಮತ್ತು ವಾರ್ಡಿನಿಂದ ಇಂದು ಪಾದಯಾತ್ರೆ ಪ್ರಾರಂಭಿಸಿದ್ದೇನೆ. ಶ್ರೀರಾಂಪುರದ 13  ನೇ ವಾರ್ಡಿನಲ್ಲಿ ಶೇಕಡಾ 74 ರಷ್ಟು ಮತ  ನನಗೇ ಚಲಾಯಿಸಿದ್ದಾರೆ. ಇಲ್ಲಿಯ ಭಾಗದ ನಿವಾಸಿಗಳಿಗೆ ಬಹಳ ತೊಂದರೆಯಿದ್ದು ಇದನ್ನು ನಿವಾರಿಸುವ ದೃಷ್ಟಿಯಿಂದ ಪಾದಯಾತ್ರೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಪ್ರತಿ ವಾರ್ಡಿನಲ್ಲಿ ಒಂದು ಆಟದ ಮೈದಾನ ಹಾಗೂ ಯೋಗ ಕೇಂದ್ರವನ್ನು ಪ್ರಾರಂಭಿಸಲು ನಿರ್ಧಾರ ಮಾಡಲಾಗಿತ್ತು. ಹಾಗೆಯೇ ಸ್ಥಳೀಯ ನಿವಾಸಿಗಳ ಸಲಹೆ ಪಡೆದು ಆಟದ ಮೈದಾನ ಹಾಗೂ ಯೋಗ ಕೇಂದ್ರವನ್ನು ಪ್ರಾರಂಭಿಸಲು  ತೀರ್ಮಾನಿಸಲಾಯಿತು.  ಈ ವಾರ್ಡಿನಲ್ಲಿ ನಮಗೆ ಎದುರಾಗಿರುವುದು ಕಾನೂನಾತ್ಮಕವಾದ ಸಮಸ್ಯೆಗಳು. ಇಲ್ಲಿ ಇರುವ  ಖಾಸಗಿ ಲೇ ಔಟ್ ಗಳು, ನಗರ ಪಾಲಿಕೆಗೆ ಒಪ್ಪಿಸದೆ  ಅಭಿವೃದ್ಧಿ ಪ್ರಾಧಿಕಾರವೇ  ಇದನ್ನು ನೋಡಿಕೊಳ್ಳುತ್ತಿದೆ. ದ್ವಂದ್ವವಾದ ವ್ಯವಸ್ಥೆಯಿಂದ ಬೀದಿ ದೀಪ ನಿರ್ವಹಣೆ, ರಸ್ತೆ ಕಾಮಗಾರಿ, ಕುಡಿಯುವ ನೀರಿನ ಸರಬರಾಜು ಮಾಡುವುದು ಹೀಗೆ ಮೂಲಭೂತ ಸೌಕರ್ಯಗಳ  ಸಮಸ್ಯೆಗಳು ಇರುವುದು ಕಂಡಿದ್ದು, ಇಂದು ಅಧಿಕಾರಿಗಳನ್ನು ಕರೆದು ಪ್ರಾಧಿಕಾರವೇ ನೋಡಿಕೊಳ್ಳಬೇಕೆಂದು ನಿರ್ದೇಶಿಸಲಾಗಿದೆ ಮತ್ತು ನಗರಪಾಲಿಕೆಗೆ ಒಪ್ಪಿಸಿರುವ ಬಡಾವಣೆಗಳನ್ನು ಆಗಬೇಕಿರುವ ಕೆಲಸಗಳನ್ನು ಮಾಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಆದೇಶಿಸಿದರು.  ಸ್ಥಳೀಯರು ಜಾಬ್ ಸಮಸ್ಯೆ, ಹಿರಿಯ ನಾಗರೀಕರ ಪಿಂಚಣಿ ಹೀಗೆ ಹಲವಾರು ತಮ್ಮ ಸ್ವಂತ ಸಮಸ್ಯೆಗಳನ್ನು ಹೇಳಿದರು ಹಾಗೂ ಕಳ್ಳತನಗಳ ಪ್ರಕರಣಗಳು ಜಾಸ್ತಿ ಆಗಿದೆ ಎಂದು ತಿಳಿಸಿದರು.   ಇದಕ್ಕೆ ಸಂಬಂಧಿಸಿದಂತೆ ಆರಕ್ಷಕರಿಗೆ ಗಸ್ತು  ಹೆಚ್ಚಿಸಲು ತಿಳಿಸಲಾಯಿತು

ಇವತ್ತಿನ ಪಾದಯಾತ್ರೆ 13  ನೇ ವಾರ್ಡಿನ ಎಲ್ಲ ಭಾಗಗಳಲ್ಲಿ ನಡೆದಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: