
ಕರ್ನಾಟಕಪ್ರಮುಖ ಸುದ್ದಿ
ರಜನಿಯ 2.0 ವಿತರಣೆಗೆ ಮುಂದೆ ಬಾರದ ವಿತರಕರು!: ಕಾಲಾ ಕಲೆಕ್ಷನ್ ಇಳಿಮುಖ ಕಾರಣ?
ಚೆನ್ನೈ (ಜೂನ್ 22): ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಲಾ’ ಚಿತ್ರ ಬಿಡುಗಡೆಗೊಂಡಿದ್ದು, ಆರಂಭಿಕ ವಿಘ್ನಗಳ ನಂತರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗ ರಜನಿ ಹಾಗೂ ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರದ ಕಡೆ ಅಭಿಮಾನಿಗಳ ಚಿತ್ತ ನೆಟ್ಟಿದೆ.
ಆದರೆ ಈ ಚಿತ್ರದ ಕುರಿತು ಬಹಿರಂಗೊಂಡಿರುವ ಮಾಹಿತಿಯೊಂದು ರಜನಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಈಗ ಬಿಡುಗಡೆಗೊಂಡಿರುವ ‘ಕಾಲಾ’ ಚಿತ್ರದ ಹಿಂದಿ ಅವತರಣಿಕೆ ಬಾಕ್ಸಾಫೀಸ್ ಗಳಿಕೆಯಲ್ಲಿ ಹಿಂದೆ ಬಿದ್ದಿರುವ ಕಾರಣ 2.0 ಚಿತ್ರ ಖರೀದಿಸಲು ವಿತರಕರು ಹಿಂದೆ ಮುಂದೆ ನೋಡುತ್ತಿದ್ದಾರಂತೆ.
ಬಾಲಿವುಡ್ ನಲ್ಲಿ ರಜನಿ ಚಿತ್ರಗಳು ಹೆಚ್ಚೇನು ಗಳಿಕೆ ಮಾಡುತ್ತಿರಲಿಲ್ಲವಾದರೂ ‘ಕಾಲಾ’ ಈ ಹಿಂದಿನ ರಜನಿ ಚಿತ್ರಗಳಿಗಿಂತ ಗಳಿಕೆಯಲ್ಲಿ ಹಿಂದೆ ಬಿದ್ದಿರುವುದು ವಿತರಕರನ್ನು ಕಂಗೆಡಿಸಿದೆಯಂತೆ.
ಭಾರತೀಯ ಚಿತ್ರರಂಗದಲ್ಲೇ 2.0 ಅತಿ ಹೆಚ್ಚು ಬಜೆಟ್ನ ಚಿತ್ರ ಎಂಬ ಹೆಗ್ಗಳಿಕೆ ಹೊಂದಿದ್ದು, ಚಿತ್ರದಲ್ಲಿ ಬಾಲಿವುಡ್ನ ಖ್ಯಾತ ನಟ ಅಕ್ಷಯ್ ಕುಮಾರ್ ಅಭಿನಯಿಸಿದ್ದರೂ ಅವರದು ಖಳನಾಯಕನ ಪಾತ್ರವಾಗಿರುವ ಕಾರಣ ಬಾಲಿವುಡ್ ವಿತರಕರು 2.0 ಚಿತ್ರ ವಿತರಣೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. (ಎನ್.ಬಿ)