ಮೈಸೂರು

ಕಷ್ಟಗಳ ಅರಿವಿಲ್ಲದ ನಾಯಕ ಜನಪರ ಕಾಳಜಿ ವಹಿಸಲ್ಲ : ದಿನೇಶ್ ಅಮಿನ್ ಮಟ್ಟು

ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿ ಬಡವರ ಮನೆ ಬಾಗಿಲಿಗೆ ಬ್ಯಾಂಕ್ ಗಳನ್ನು ತಂದು ನಿಲ್ಲಿಸುವ ಕಾರ್ಯವನ್ನು ಮಾಜಿ ಪ್ರಧಾನಿ ಡಾ.ಇಂದಿರಾಗಾಂಧಿಯವರು ಮಾಡಿದ್ದರು. ಆದರೆ ಇಂದು ಜನಪರ ಕಾಳಜಿ ಇಲ್ಲದವರು 1000 ಹಾಗೂ 500 ಮುಖಬೆಲೆಯ ನೋಟುಗಳನ್ನು ರದ್ದುಪಡಿಸುವ ಮೂಲಕ ಬಡವರನ್ನು ಶೋಷಿಸುತ್ತಿದೆ  ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್  ಅಮಿನ್ ಮಟ್ಟು ಹೇಳಿದರು.

ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ, ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾ ರೈತ ಕಾಂಗ್ರೆಸ್ ಘಟಕ ಇವರ ಆಶ್ರಯದಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ಮರಣೆ ಹಾಗೂ ಇದರ ಅಂಗವಾಗಿ ಸಮಾಜಮುಖಿ ಯುವ ರಾಜಕಾರಣಿಗಳ ಅನಿವಾರ್ಯತೆ ಹಾಗೂ ಸದ್ಯದ ಸವಾಲುಗಳು ಕುರಿತ ವಿಚಾರ ಸಂಕಿರಣದಲ್ಲಿ ದಿನೇಶ್ ಅಮೀನ್ ಮಟ್ಟು ವಿಷಯ ಮಂಡಿಸಿದರು.

ನಾಯಕನಾದವನಿಗೆ ಜನಸಾಮಾನ್ಯರ ಕಷ್ಟಕಾರ್ಪಣ್ಯಗಳ ಅರಿವಿರಬೇಕು. ಮುನ್ನೋಟ ಮತ್ತು ಭವಿಷ್ಯದ ಬಗ್ಗೆ ಕಾಳಜಿ ಇರಬೇಕು. ಗಾಂಧಿ, ಅಂಬೇಡ್ಕರ್ ಅವರಿಗೆ ಆ ಎಲ್ಲ ಗುಣಗಳಿರುವುದರಿಂದಲೇ ಅವರು ನಾಯಕರಾಗಿದ್ದರು ಎಂದರು.

ಕುವೆಂಪು-ಕಾರಂತರು ಸಾಹಿತ್ಯದ ಮೂಲಕ ಜನರನ್ನು ಪ್ರಭಾವಿಸಿದ್ದರು.  ಅಂತಹವರಿಂದಲೇ ನೂರಾರು ಮಂದಿ ವೈಚಾರಿಕ ಪ್ರಜ್ಞೆ ಬೆಳೆಸಿಕೊಂಡರು. ಆದರೆ ಅಂತಹ ಸಾಹಿತ್ಯಗಳೀಗಿಲ್ಲ. ಅದರಿಂದ ಇಂದಿನ ಯುವಕರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿದರು.

ರೈತ ಹೋರಾಟಗಾರ್ತಿ ಸುನಂದ ಜಯರಾಮ್ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯುವಕರು ತಮ್ಮ ಜವಾಬ್ದಾರಿ, ಕರ್ತವ್ಯದ ಅರಿವಿನೊಂದಿಗೆ ಆಲೋಚನೆಯ ದಿಕ್ಕನ್ನು ಸರಿಮಾಡಿಕೊಳ್ಳಬೇಕು. ಅಂಧಾಭಿಮಾನ ಬಿಟ್ಟು, ಸಂಪ್ರದಾಯವನ್ನು ಮುರಿದು, ದುಶ್ಚಟಗಳಿಂದ ದೂರ ಉಳಿಯಬೇಕು ಎಂದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ , ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ರವಿಶಂಕರ್, ಕರ್ನಾಟಕ ರಾಜ್ಯ ರೈತ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ, ಜಿಲ್ಲಾ ರೈತ ಕಾಂಗ್ರೆಸ್ ಅಧ್ಯಕ್ಷ ಸುರೇಶ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: