ಪ್ರಮುಖ ಸುದ್ದಿ

ಕೆರೆಗೆ ನೀರು ಬಂದಿರುವುದನ್ನು ಗಮನಿಸಿ ಮೀನು ಬಿಡಲು ಮುಂದಾಗಿ : ಬಿ.ಟಿ. ಸತೀಶ್

ರಾಜ್ಯ(ಹಾಸನ)ಜೂ.23:-ಹಾಸನ ತಾಲೂಕಿನ ಯಾವ ಕೆರೆಗಳಲ್ಲಿ ನೀರು ಬಂದಿದೆ ಎಂಬುದನ್ನು ಗಮನಿಸಿ ಕೂಡಲೇ ಮೀನುಗಾರಿಕೆ ಇಲಾಖೆ ಮೀನು ಮರಿಗಳನ್ನು ಬಿಡಲು ಮುಂದಾಗಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಬಿ.ಟಿ. ಸತೀಶ್ ನಿರ್ದೇಶಿಸಿದರು.

ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಹಾಸನ ತಾಲೂಕಿನಲ್ಲಿ ಉತ್ತಮ ಮಳೆ ಆಗುತ್ತಿದ್ದು, ಈಗಾಗಲೇ ಅನೇಕ ಕೆರೆಗಳು ತುಂಬಿ ಹೋದರೆ ಉಳಿದ ಕೆರೆಗಳು ಅರ್ಧಕ್ಕಿಂತ ಹೆಚ್ಚಿನ ಭಾಗ ಭರ್ತಿಯಾಗಿದೆ. ಅಂತಹ ಕೆರೆಗಳನ್ನು ಪರಿಶೀಲಿಸಿ ಮೀನುಗಾರಿಕ ಇಲಾಖೆ ಅಧಿಕಾರಿಗಳು ಮೀನಿನ ಮರಿಗಳನ್ನು ಬಿಡಬೇಕು ಎಂದು ಹೇಳಿದರು.

ಹೇಮಾವತಿ ಜಲಾಶಯ ಹಾಗೂ ಮತ್ತಿತರೆಡೆ ಮರುಗೊಡವ ಫಿಷ್‍ಗಳು ಇತರೆ ಮೀನುಗಳನ್ನು ತಿನ್ನುತ್ತಿದೆ ಎಂಬ ದೂರು ಕೇಳಿ ಬಂದಿದ್ದು, ಕೂಡಲೇ ಮರುಗೊಡವ ಮೀನನ್ನು ಹತೋಟಿಗೆ ತರಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೇ ಬೇರೆ ಮೀನಿನ ಜನನವೇ ಕಡಿಮೆ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಪ್ರೀತಿ ಮಾತನಾಡಿ, ಈ ವರ್ಷದ ಹಾಸನ ತಾಲೂಕಿನ ಬಹುತೇಕ ಭಾಗಗಳಲ್ಲಿ ಒಳ್ಳೆಯ ಮಳೆ ಆಗಿದೆ. ಶೇಕಡವಾರು ಕೆರೆಗಳು ತುಂಬಿ ಹೋಗಿದೆ. ಶೇಕಡ 50 ರಷ್ಟು ತುಂಬಿದ ಕೆರೆಯನ್ನು ಗುರುತಿಸಿ ಮೀನಿನ ಮರಿಗಳನ್ನು ಬಿಡಲು ಕ್ರಮಕೈಗೊಳ್ಳಲಾಗುವುದು ಎಂದರು. ಮೀನು ಬೆಳೆದ ಮೇಲೆ ಹರಾಜು ಮೂಲಕ ಟೆಂಡರ್ ಕರೆದು ಮಾರಾಟ ಮಾಡಲಾಗುವುದು. ದಪ್ಪ ಬಾಯಿ ಕಾಟ್ಲಾ ಹಾಗೂ ಕಾಟ್ಲಾ ಮೀನಿನ ಮರಿಗಳನ್ನು ಹೆಚ್ಚಾಗಿ ಕೆರೆಗೆ ಬಿಡಲಾಗುತ್ತದೆ. ಮೀನಿನ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲು ನಮ್ಮಲ್ಲಿ ಸಾಕಷ್ಟು ಸೌಲಭ್ಯ ಇಲ್ಲದಿರುವುದರಿಂದ ಹೊರಗಿನಿಂದಲೇ ಮೀನು ಮರಿ ತರಿಸಿ ವಿತರಿಸಲಾಗುತ್ತಿದೆ ಎಂದು ವಿವರಿಸಿದರು.

ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಗೊರೂರಿನ ವಿಕಾಸ್ ಮಾತನಾಡುತ್ತಾ, ಸಜೂನ್ ಮತ್ತು ಜುಲೈ ಎರಡು ತಿಂಗಳು ಮೀನಿನ ಮರಿ ಬಿಡುವ ಕಾಲವಾಗಿದೆ. ಈ ವೇಳೆ ಮೀನುಗಾರರು ಮೀನು ಹಿಡಿಯದಂತೆ ಆದೇಶಿಸಲಾಗುವುದು ಯಾರಾದರೂ ಮೀನು ಹಿಡಿಯುವ ಸಾಹಸಕ್ಕೆ ಕೈಹಾಕಿದರೇ ಅಂತವರನ್ನು ಹಿಡಿದು ಮೀನು ಹಿಡಿಯುವ ಬಲೆ ಮತ್ತು ಎಲ್ಲಾ ಸಾಮಾಗ್ರಿಯನ್ನು ಸೀಜ್ ಮಾಡುವುದಾಗಿ ಎಚ್ಚರಿಸಿದರು. ಮರುಗೊಡವ ಮೀನನ್ನು ಸಂಪೂರ್ಣವಾಗಿ ನಾಶಪಡಿಸಲು ಸರ್ಕಾರದಿಂದಲೇ ಆದೇಶವಿದ್ದು, ಇನ್ನು ಕೆಲ ವರ್ಷಗಳಲ್ಲಿ ಸಂಪೂರ್ಣವಾಗಿ ನಾಶ ಮಾಡಲು ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶಿಶು ಅಭಿವದ್ಧಿ ಇಲಾಖೆ ಅಧಿಕಾರಿ ಸಿ.ಬಿ. ರೂಪ ತಮ್ಮ ಇಲಾಖೆಯ ಬಗ್ಗೆ ವಿವರ ನೀಡುತ್ತಾ, ಗರ್ಭಿಣಿ ಮತ್ತು ಬಾಣಂತಿಯರಿಗೆ ಇಲಾಖೆ ವತಿಯಿಂದ ಎಲ್ಲಾ ಸೌಲಭ್ಯವನ್ನು ಸಮರ್ಪಕವಾಗಿ ಕೊಡಲಾಗುತ್ತಿದೆ. ಗರ್ಭಿಣಿಯರಿಗೆ ಮೂರು ಕಂತುಗಳಲ್ಲಿ ಹೆರಿಗೆ ಭತ್ಯೆ ನೀಡುವ ಯೋಜನೆ ಜಾರಿಯಲ್ಲಿರುವುದರಿಂದ ಅರ್ಹ ಫಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದಾರೆ ಎಂದರು. ತಾಲೂಕಿನಲ್ಲಿ 253 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿದೆ. ಹೊಸದಾಗಿ 50 ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಕಾಮಗಾರಿ ಸದ್ಯ ಸ್ಥಗಿತವಾಗಿದೆ. ಆದಷ್ಟು ಬೇಗ ಕಟ್ಟಡ ಕಾಮಾಗಾರಿಯನ್ನು ಪೂರ್ಣಗೊಳಿಸಬೇಕಿದೆ ಎಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷೆ ನಾಗರತ್ನ, ಸಾಮಾಜಿಕ ಸ್ಥಾಯಿ ಸಮಿತಿ ಸದಸ್ಯ ಯು.ಕೆ. ಶಿವನಂಜಪ್ಪ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸಿ. ದೇವರಾಜೇಗೌಡ ಇತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: