ಕರ್ನಾಟಕಪ್ರಮುಖ ಸುದ್ದಿ

ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಸಕ್ರಿಯ, ಉಪಚುನಾವಣೆಯಲ್ಲಿ ಸ್ಪರ್ಧೆ ಬಹುತೇಕ ಖಚಿತ?

ರಾಮನಗರ (ಜೂನ್ 23): ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ರಾಮನಗರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಕುತೂಹಲದ ನಡುವೆಯೇ ಸಿಎಂ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ರಾಮನಗರದ ಕೆಲವು ದಿನಗಳಿಂದ ಸಕ್ರೀಯರಾಗಿದ್ದಾರೆ. ಜೆಡಿಎಸ್ ಟಿಕೆಟ್ ಅವರಿಗೇ ಸಿಗಲಿದೆ ಎಂದು ರಾಮನಗರ ಜೆಡಿಎಸ್ ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ನಿನ್ನೆಯಷ್ಟೆ ಅನಿತಾ ಕುಮಾರಸ್ವಾಮಿ ಅವರು ರಾಮನಗರದ ಕುರುಬರಹಳ್ಳಿಯ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿದ್ದರು. ಇದರ ಜೊತೆಗೇ ಸ್ಥಳೀಯ ರಾಜಕೀಯ ಮುಖಂಡರು ಮತ್ತು ಜನರೊಂದಿಗೆ ಬೆರೆತಿದ್ದಾರೆ. ರಾಮನಗರದ ಹಲವು ಜೆಡಿಎಸ್ ಮುಖಂಡರನ್ನೂ ಅನಿತಾ ಕುಮಾರಸ್ವಾಮಿ ಅವರು ಭೇಟಿಯಾಗಿದ್ದಾರೆ ಎನ್ನಲಾಗಿದ್ದು, ಚುನಾವಣೆ ಕುರಿತು ಮಾತುಕತೆಯನ್ನೂ ಮಾಡಿದ್ದಾರೆ ಎಂಬ ಸುದ್ದಿಯೂ ಇದೆ.

ಚನ್ನಪಟ್ಟಣ ಹಾಗೂ ರಾಮನಗರ ಎರಡೂ ಕ್ಷೇತ್ರದಲ್ಲಿ ಗೆದ್ದಿದ್ದ ಕುಮಾರಸ್ವಾಮಿ ಅವರು, ಚನ್ನಪಟ್ಟಣ ಉಳಿಸಿಕೊಂಡು ರಾಮನಗರಕ್ಕೆ ರಾಜಿನಾಮೆ ನೀಡಿದ್ದರು. ಹೀಗಾಗಿ ಅಲ್ಲಿ ಉಪ ಚುನಾವಣೆ ನಡೆಯಲಿದೆ. ರಾಮನಗರದಿಂದ ಸಚಿವ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯವೂ ಇತ್ತು. ಅಲ್ಲದೆ ಸ್ಥಳೀಯ ಕೆಲವು ಮುಖಂಡರ ಹೆಸರುಗಳೂ ಕೇಳಿಬಂದಿತ್ತು. ಇದೀಗ ಅನಿತಾ ಕುಮಾರಸ್ವಾಮಿ ಅವರಿಗೆ ರಾಮನಗರ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.

ರಾಮನಗರದಲ್ಲಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ. ಬಿಜೆಪಿಯು ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲವಾದರೂ ಚನ್ನಪಟ್ಟಣದಲ್ಲಿ ಸೋತಿರುವ ಸಿ.ಪಿ.ಯೋಗೀಶ್ವರ್‌ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. (ಎನ್.ಬಿ)

Leave a Reply

comments

Related Articles

error: