ಪ್ರಮುಖ ಸುದ್ದಿಮೈಸೂರು

ಮಾಜಿ ಸಿಎಂ ಸಿದ್ದರಾಮ್ಯಯ ತೇಜೋವಧೆಗಾಗಿ ಸುಳ್ಳು ಎಫ್ಐಆರ್ : ಆರೋಪ

ಹೆಸರು ಕೈ ಬಿಡದಿದ್ದರೆ ಪ್ರಗತಿಪರ ಚಿಂತಕರಿಂದ ಉಗ್ರ ಹೋರಾಟ : ಎಚ್ಚರಿಕೆ

ಮೈಸೂರು, ಜೂ.23 : ಮಾಜಿ ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ಉದ್ದೇಶದಿಂದ ಕೆಲ ರಾಜಕೀಯ ಪ್ರಭಾವಿಗಳು ನಡೆಸಿದ ಷಡ್ಯಂತ್ರದ ಪರಿಣಾಮ ಡಿನೋಟಿಫಿಕೇಷನ್ ಎಂಬ ಸುಳ್ಳು ಕಾರಣದ ಹೆಸರಿನಲ್ಲಿ ಅವರ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ನಿಂದ ಅವರ ಹೆಸರನ್ನು ಕೈಬಿಡದಿದ್ದರೆ ವಿಚಾರ ವಾದಿಗಳು, ಚಿಂತಕರು, ಸಾಹಿತಿಗಳು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಕೆ.ಸಿ. ಪುಟ್ಟಿಸಿದ್ದಶೆಟ್ಟಿ ಎಚ್ಚರಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಘಟನೆ ನಡೆದು ಸುಮಾರು ೨೦ ವರ್ಷ ನಂತರ ಆರ್‌ಟಿಐ ಕಾರ್ಯಕರ್ತರೊಬ್ಬರು ಕೆಲ ಪ್ರಭಾವಿ ರಾಜಕಾರಣಿಗಳಿಂದಾಗಿ ಆರ್‌ಟಿಐ ಹೆಸರಿನಲ್ಲಿ ದಾಖಲೆ ಪಡೆದು ಡಿನೋಟಿಫಿಕೇಷನ್ ಕಾರಣ ನೀಡಿ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗುವಂತೆ ಮಾಡಿದ್ದಾರೆ.

ಉಲ್ಲೇಖಿತ ಜಮೀನಿಗೆ ಸಂಬಂಧಿಸಿದಂತೆ ನೋಟಿಫಿಕೇಷನ್ನೇ ಆಗಿಲ್ಲದಿರುವಾಗಿ ಡಿನೋಟಿಫಿಕೇಷನ್ ಮಾತೇ ಬರುವುದಿಲ್ಲ. ಹೀಗಿದ್ದರೂ ಎಫ್‌ಐಆರ್‌ನಲ್ಲಿ ಸಿದ್ದರಾಮಯ್ಯ ಅವರ ಹೆಸರು ದಾಖಲಾಗಿರುವುದು ಉದ್ದೇಶಪೂರ್ವಕ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಕೂಡಲೇ ಗೃಹಸಚಿವರು ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ ಅಧಿಕಾರ ವ್ಯಾಪ್ತಿಯಲ್ಲಿ ಸತ್ಯಶೋಧನಾ ಸಮಿತಿ ರಚಿಸಬೇಕೆಂದು ಒತ್ತಾಯಿಸಿದರು.

ಇನ್ನು, ಮನಸ್ಸು ಮಾಡಿದರೆ ಎರಡೇ ದಿನದಲ್ಲಿ ರಾಜ್ಯ ಸರ್ಕಾರ ಬೀಳುವಂತೆ ಮಾಡುವ ಸಾಮರ್ಥ್ಯವಿದ್ದರೂ ತ್ಯಾಗ ಮನೋಭಾವದವರೂ, ಸಜ್ಜನರೂ ಆಗಿರುವ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯುವ ಈ ಕೃತ್ಯ ನಡೆದಿದೆ ಎಂದರಲ್ಲದೆ, ಇಂತಹ ಪೊಳ್ಳು ಕ್ರಮಗಳಿಗೆಲ್ಲ ಸಿದ್ದರಾಮಯ್ಯ ಜಗ್ಗುವವರಲ್ಲ ಎಂದರು.

ಎಚ್.ಬಿ. ಸಂಪತ್ತು, ಬೋರಪ್ಪಶೆಟ್ಟಿ, ಡಾ. ಮಧು, ಗೋವಿಂದಶೆಟ್ಟಿ, ಮಹದೇವ ಗಾಣಿಗ ಇದ್ದರು. (ವರದಿ : ಕೆ.ಎಂ.ಆರ್)

 

Leave a Reply

comments

Related Articles

error: