
ಮೈಸೂರು
ಮೈಸೂರಿನ ಜನತೆಗೆ ತಂಪೆರೆದ ಮಳೆರಾಯ
ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆಯಂತೆ ವಾರ್ಧಾ ಚಂಡಮಾರುತ ಸೋಮವಾರ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ್ದು, ಮೈಸೂರಿನಲ್ಲೂ ಸೋಮವಾರ ರಾತ್ರಿಯಿಡೀ ಭಾರಿ ಮಳೆ ಸುರಿದಿದ್ದು, ಜನತೆಗೆ ತಂಪೆರೆದಿದೆ.
ಕಳೆದ ನಾಲ್ಕು ತಿಂಗಳುಗಳಿಂದ ಮಳೆಯನ್ನೇ ಮೈಸೂರು ಕಂಡಿರಲಿಲ್ಲ. ಆದರೆ ಸೋಮವಾರ ರಾತ್ರಿಯಿಂದ ಮಳೆ ಒಂದೇ ಸಮನೆ ಸುರಿದಿದ್ದು, ಮಂಗಳವಾರವೂ ಬೆಳಗಿನ ವೇಳೆ ತುಂತುರು ಮಳೆ ಮುಂದುವರಿದಿದೆ. ಸರಿಸುಮಾರು ಛತ್ರಿ ಹಿಡಿಯದೇ ತಿರುಗಾಡುತ್ತಿದ್ದ ಮೈಸೂರು ಜನತೆ ಕೈಯ್ಯಲ್ಲಿ ಛತ್ರಿ ಹಿಡಿದು ರಸ್ತೆಗಿಳಿದಿದ್ದರು. ಮಂಜು ಮುಸುಕಿದಂತೆ ಮೋಡ ಕವಿದ ವಾತಾವರಣ ಮಂಗಳವಾರವೂ ಮುಂದುವರಿದಿದೆ. ಮೈಸೂರಿನಲ್ಲಿ ದಿನದ ಉಷ್ಣಾಂಶ 21ರಿಂದ 19 ಡಿಗ್ರಿ ಸೆಲ್ಶಿಯಸ್ ನಿರೀಕ್ಷಿಸಬಹುದು. ತೇವಾಂಶ 90ಪರ್ಸೆಂಟ್. ಗಾಳಿಯ ವೇಗ ಗಂಟೆಗೆ 11ಕಿಲೋಮೀಟರ್ ಇರಲಿದೆ.
ಮಂಗಳವಾರವೂ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಹಲವು ದಿನಗಳಿಂದ ನೀರಿಲ್ಲದೇ ಕಂಗಾಲಾಗಿದ್ದ ರೈತರ ಮುಖದಲ್ಲಿ ತುಸು ಸಂತಸ ಮನೆ ಮಾಡಿದೆ. ಡಿಸೆಂಬರ್ 17ರವರೆಗೆ ಸಾಧಾರಣ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ಮಳೆಯಿಂದ ಯಾವುದೇ ಹಾನಿಯಾಗಿರುವ ಕುರಿತು ವರದಿಯಾಗಿಲ್ಲ.