ಮೈಸೂರು

ಅಕ್ರಮ ಮರಳು ಸಾಗಣೆ : ಐದು ಲಾರಿ, ಎರಡು ಕಾರು ವಶ

ಅಕ್ರಮ ಮರಳು ಸಾಗಾಣೆ ಮಾಡುತ್ತಿದ್ದ ದಂಧೆಕೋರರ ಮೇಲೆ ಕಣ್ಣಿರಿಸಿದ್ದ ಕೆ.ಆರ್.ನಗರ ಪೊಲೀಸರು ಪ್ರತ್ಯೇಕವಾಗಿ ಎರಡು ಕಡೆ ದಾಳಿ  ನಡೆಸಿ 5 ಲಾರಿಗಳನ್ನು ಹಾಗೂ 2 ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹಂಪಾಪುರ ರಸ್ತೆಯಲ್ಲಿ ಅಕ್ರಮವಾಗಿ ಲಾರಿಗಳಲ್ಲಿ ಮರಳುಗಳನ್ನು ಸಾಗಿಸುತ್ತಿದ್ದವರ ಮೇಲೆ ದಾಳಿ ಮಾಡಿದ ಪೊಲೀಸರು, ಅಕ್ರಮ ಮರಳು ಸಾಗಾಟದಲ್ಲಿ ತೊಡಗಿದ್ದ ಲಕ್ಷ್ಮಣ, ಶೀತಲ್ ಶೆಟ್ಟಿ, ಲತೇಶ್, ನವೀನ್, ಸಮೀರ್ ಗಣೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಅವರ ಹಿಂದೆಯೇ ಟಾಟಾ ವಿಂಗರ್ ಕಾರಿನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಕಿರಣ್ ಜಾನ್‍ಸನ್ ಪೆರೆರಾ ಎಂಬವರು ಕೆ.ಆರ್.ನಗರದ ಹಂಪಾಪುರ ರಸ್ತೆಯ ಮೂಲಕ ಮರಳು ಸಾಗಿಸುವಾಗಿ ಸಿಕ್ಕಿಬಿದ್ದಿದ್ದಾರೆ. ಲಾರಿ, ಕಾರಿನೊಂದಿಗೆ ಮರಳು ಹಾಗೂ ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಇದೇ ರೀತಿ ಇನ್ನೊಂದು ಪ್ರಕರಣದಲ್ಲಿ  ಕೆ.ಆರ್.ನಗರ ಅರ್ಕೇಶ್ವರ ದೇವಸ್ಥಾನ ಕಡೆಯಿಂದ ಅಕ್ರಮವಾಗಿ ಲಾರಿ ಹಾಗೂ ಕಾರಿನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಮಹಮ್ಮದ್ ಫಾಜೀಲ್, ಇಲಿಯಾಸ್ ಮಹಮ್ಮದ್ ಮುಸ್ತಾಫಾ ಅವರನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.  ಎಸ್ಟೀಮ್ ಕಾರು ಚಾಲಕ ಅನಿಫ್ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಜಗದೀಶ್ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ.

ಮರಳನ್ನು ಮಂಗಳೂರಿನ ಅಡ್ಯಾರ್ ಗ್ರಾಮದ ಬಳಿಯ ನೇತ್ರಾವತಿ ನದಿಯ ತೀರದಲ್ಲಿ ಅಕ್ರಮವಾಗಿ ತೆಗೆದು ಕಾಣದಂತೆ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಮೈಸೂರಿಗೆ ಸಾಗಾಣೆ ಮಾಡಿ ಹೆಚ್ಚಿನ ಲಾಭಕ್ಕಾಗಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದು ಬಂದಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಯಾಗಿರುವ ಆರೋಪಿಗಳನ್ನು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

comments

Related Articles

error: