ಕರ್ನಾಟಕ

ರೈತರಿಗೆ ಸಮರ್ಪಕ ಮಾಹಿತಿ ನೀಡಲು ಶಾಸಕ ಪ್ರೀತಂ ಗೌಡ ಸೂಚನೆ

ಹಾಸನ (ಜೂನ್ 25): ಹಾಸನ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ, ಇಂತಹ ಸಂದರ್ಭದಲ್ಲಿ ಹೋಬಳಿ ವ್ಯಾಪ್ತಿಯ ಕೃಷಿ ಇಲಾಖೆ ಅಧಿಕಾರಿಗಳು ರೈತರುಗಳ ಜಮೀನಿಗೆ ಭೇಟಿ ನೀಡಿ ಅವರಿಗೆ ಸಮಪರ್ಕ ಮಾಹಿತಿಯನ್ನು ನೀಡಬೇಕು ಎಂದು ಶಾಸಕರಾದ ಪ್ರೀತಂ ಗೌಡ ಅವರು ತಿಳಿಸಿದರು.

ಹಾಸನದ ಕೃಷಿ ಇಲಾಖೆ ಆವರಣದಲ್ಲಿ ಜೂನ್ 22 ರಂದು ಕೃಷಿ ಹಾಗೂ ಬೇಸಾಯ ಸಂಭಂದಿತ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಹೋಬಳಿಯಾದ್ಯಂತ ಸಂಚರಿಸುವ ಕೃಷಿ ರಥಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಹೆಚ್ಚಿನ ಶ್ರಮವಹಿಸಿ ಕೃಷಿ ಚಟುವಟಿಕೆಗಳಿಗೆ ರೈತರುಗಳನ್ನು ಪ್ರೇರೆಪಿಸಬೇಕು. ಬೆಳೆಗೆ ತಕ್ಕ ಮಾರುಕಟ್ಟೆಯನ್ನು ಒದಗಿಸಿಕೊಡಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಸತೀಶ್ ಅವರು ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ರೈತರುಗಳನ್ನು ಕಾರ್ಯಕ್ರಮಕ್ಕೆ ಸೇರಿಸಬೇಕು, ಅವರಿಗೆ ಉತ್ತಮ ತಾಂತ್ರಿಕ ಸಲಹೆಗಳನ್ನು ನೀಡಬೇಕು, ವೇದಿಕೆ ಕಾರ್ಯಕ್ರಮದಂದು ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸಬೇಕು ಈ ಕಾರ್ಯಕ್ರಮ ರೈತರ ಪಾಲಿಗೆ ಹಬ್ಬದಂತೆ ಎಂದರು.

ಸಹಾಯಕ ಕೃಷಿ ನಿರ್ದೇಶಕರಾದ ಡಾ:ಭಾನುಪ್ರಕಾಶ್ ಮಾತನಾಡಿ ಕೃಷಿ ಸಂಬಂಧಿತ ಇಲಾಖೆಗಳ ಕಾರ್ಯಕ್ರಮಗಳನ್ನು ರೈತರÀ ಮನೆ ಬಾಗಿಲಿಗೆ ತಲುಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತರ ಕೃಷಿ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಒದಗಿಸುವುದಾಗಿ ತಿಳಿಸಿದರು. ಮಾನ್ಯ ಅಧ್ಯಕ್ಷರು ಚಾಲನೆ ನೀಡಿ ಸರ್ಕಾರದಲ್ಲಿ ಕೃಷಿ ಸಂಬಂಧಿತ ಎಲ್ಲಾ ಇಲಾಖೆಗಳ ಯೋಜನೆಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಕೃಷಿ ಅಭಿಯಾನ ಉತ್ತಮ ಕಾರ್ಯಕ್ರಮವಾಗಿದ್ದು, ಯಶಸ್ವಿಯಾಗಲೆಂದು ಹಾರೈಸಿದರು.

ಕೃಷಿ ಮಾಹಿತಿ ರಥವು ಜೂನ್ 22 ರಿಂದ 15 ದಿನಗಳ ಕಾಲ ಹಾಸನ ತಾಲ್ಲೂಕಿನಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ ಇಲಾಖಾ ಯೋಜನೆಗಳು, ಸವಲತ್ತುಗಳು, ರೈತರ ಸಮಸ್ಯೆಗಳು, ಕೃಷಿ ನೂತನ ತಂತ್ರಜ್ಞಾನಗಳು ಮತ್ತು ಹಲವು ಮಾಹಿತಿಗಳನ್ನು ರೈತರಿಗೆ ಶೀರ್ಷಿಕೆಯಂತೆ ಮನೆ ಬಾಗಿಲಿಗೆ ತಲುಪಿಸುವ ವಿನೂತನ ಯೋಜನೆಯಾಗಿರುತ್ತದೆ. ಭೂ ಚೇತನ, ರಾಗಿ ಮತ್ತು ಜೋಳ ಅಭಿವೃದ್ದಿ ಯೋಜನೆ, ಕೃಷಿ ಭಾಗ್ಯ ಯೋಜನೆ , ಸಮಗ್ರ ಜಲಾನಯನ ಯೋಜನೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಯೋಜನೆಗಳ ಸಮಗ್ರ ಮಾಹಿತಿಯನ್ನೊಳಗೊಂಡ ಕರ ಪತ್ರಗಳನ್ನು ವಿತರಿಸಲಾಗುವುದು.

ಜೂನ್ 25 ರಂದು ಕಟ್ಟಾಯ ಹೋಬಳಿ, ಅಂಕಪುರ ಗ್ರಾಮದಲ್ಲಿ ಕೃಷಿ ವಸ್ತು ಪ್ರದರ್ಶನ ಹಾಗೂ ರೈತ ಸಂವಾದ ಕಾರ್ಯಕ್ರಮ ಆಯೋಜಿಸಿದ್ದು, ಕಟ್ಟಾಯ ಹೋಬಳಿಯ ಬೆಳೆವಾರು ರೈತರ ಸಮಸ್ಯೆಗಳನ್ನು ಚರ್ಚಿಸಿ ಸ್ಥಳದಲ್ಲೇ ವಿಜ್ಞಾನಿಗಳಿಂದ ಪರಿಹಾರ ಸೂಚಿಸಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರುಗಳಾದ ನಿಂಗೇಗೌಡ ಮತ್ತು ಜಗದೀಶ್ ರಾಮಘಟ್ಟ , ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರು ಮತ್ತು ತಾಲ್ಲೂಕು ಪಂಚಾಯತಿ ಸದಸ್ಯರಾದ ಸೋಮನಹಳ್ಳಿ ನಾಗರಾಜು ಮತ್ತು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರು ಕೃಷ್ಣೇಗೌಡರವರು ಹಾಗೂ ಹಾಸನ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು, ಉಪ ಕೃಷಿ ನಿರ್ದೇಶಕರು, ಹಾಸನ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಮತ್ತು ಕೃಷಿ ಸಂಬಂಧಿತ ಎಲ್ಲಾ ಇಲಾಖೆಗಳ ಅಧಿಕಾರಿ ವರ್ಗದವರು ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: