ಕರ್ನಾಟಕ

ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಯೋಧನ ಅಂತ್ಯಕ್ರಿಯೆ

ಬೆಳಗಾವಿ,ಜೂ.25-ಹೃದಯಾಘಾತದಿಂದ ಮೃತಪಟ್ಟ ಯೋಧ ಶಶಿಧರ ಶಿವಪುತ್ರಯ್ಯ ಗುರವಯ್ಯನವರ (39) ಅಂತ್ಯಸಂಸ್ಕಾರ ಜಿಲ್ಲೆಯ ಚನ್ನಮ್ಮನ ಕಿತ್ತೂರು ಗ್ರಾಮದಲ್ಲಿ ಭಾನುವಾರ ಸಕಲ ಸರ್ಕಾರಿ ಮತ್ತು ಮಿಲಿಟರಿ ಗೌರವಗಳೊಂದಿಗೆ ನೆರವೇರಿತು.

ಗುಜರಾತ್ ನ ಅಹಮದಾಬಾದ್ ನಲ್ಲಿ ಶುಕ್ರವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದ ಶಶಿಧರ ಅವರ ಪಾರ್ಥಿವ ಶರೀರ ಸ್ವಗ್ರಾಮ ತಲುಪುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಶಶಿಧರನ ಪಾರ್ಥಿವ ಶರೀರವನ್ನು ಮೊದಲಿಗೆ ಅವರ ಮನೆ ಮುಂದೆ ಇಡಲಾಗಿತ್ತು. ಇಲ್ಲಿ ಅಂತಿಮ ಪೂಜೆ ನೆರವೇರಿಸಿದ ಬಳಿಕ ಟ್ರ್ಯಾಕ್ಟರ್ ನಲ್ಲಿ ಪಾರ್ಥಿವ ಶರೀರವನ್ನಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಒಂದೂವರೆ ಗಂಟೆಗೂ ಹೆಚ್ಚು ಕಾಲ ಮೃತ ದೇಹವನ್ನು ಗ್ರಾಮದ ಹೃದಯ ಭಾಗದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ತಹಸಿಲ್ದಾರ್ ಪ್ರವೀಣ ಹುಚ್ಚಣ್ಣನವರು ಶಶಿಧರ ಅವರ ಅಂತಿಮ ದರ್ಶನ ಪಡೆದು ತಾಲೂಕು ಆಡಳಿತದ ವತಿಯಿಂದ ಗೌರವ ಸಲ್ಲಿಸಿದರು.

ಶಾಸಕ ಮಹಾಂತೇಶ ದೊಡ್ಡಗೌಡರ, ಜಿಲ್ಲಾ ಪಂಚಾಯಿತಿ ಸದಸ್ಯೆ ರಾಧಾಶ್ಯಾಮ ಕಾದ್ರೊಳ್ಳಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಶೈಲಾ ಸಿದ್ರಾಮನಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹನ ಶ್ಯಾಮ್ ಕಾದ್ರೊಳ್ಳಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಗ್ರಾಮಸ್ಥರು ಶಶಿಧರ ಅವರ ಅಂತಿಮ ದರ್ಶನ ಪಡೆದು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಶಶಿಧರ ಅವರ ಅಂತ್ಯಸಂಸ್ಕಾರ ಲಿಂಗಾಯತ ವಿಧಿ ವಿಧಾನದಂತೆ ನಡೆಯಿತು.

ಶಶಿಧರ ಅವರಿಗೆ ಇಬ್ಬರು ಮಕ್ಕಳಿದ್ದಾರೆ. 201 ಮದ್ರಾಸ್ ಎಂಜನಿಯರಿಂಗ್ ರೆಜಿಮೆಂಟ್ ನಲ್ಲಿ ಅವರು 1998 ರಲ್ಲಿ ಸೇವೆಗೆ ಸೇರಿದ್ದರು. (ಕೆಸಿಐ, ಎಂ.ಎನ್)

Leave a Reply

comments

Related Articles

error: