ಪ್ರಮುಖ ಸುದ್ದಿ

ಸರ್ಕಾರ ಮರಳು ಸಾಗಾಣಿಕೆಗೆ ಇರುವ ಕಠಿಣ ನಿರ್ಬಂಧವನ್ನು ತೆಗೆದು ಹಾಕಿ ಬೇಡಿಕೆಗೆ ತಕ್ಕಂತೆ ಮರಳು ಪೂರೈಸುವಂತೆ ಮನವಿ

ರಾಜ್ಯ(ಮಂಡ್ಯ)ಜೂ.25:-  ರಾಜ್ಯ ಸರ್ಕಾರ ಮರಳು ಸಾಗಾಣಿಕೆಗೆ ನಿರ್ಬಂಧ ವಿಧಿಸಿರುವ ಕಾರಣ ಮರಳಿನ ಅಭಾವ ಜಾಸ್ತಿಯಾಗಿದೆ. ಇದರಿಂದ ಕಟ್ಟಡದ ಕೆಲಸಗಳು ನಿಂತುಹೋಗಿವೆ. ಕಟ್ಟಡ ಕಾರ್ಮಿಕರಿಗೆ ಕೂಲಿ ಕೆಲಸವಿಲ್ಲದೆ ತೊಂದರೆಯಾಗಿದೆ. ಹಾಗಾಗಿ ಸರ್ಕಾರ ಮರಳು ಸಾಗಾಣಿಕೆಗೆ ಇರುವ ಕಠಿಣ ನಿರ್ಬಂಧವನ್ನು ತೆಗೆದು ಹಾಕಿ ಬೇಡಿಕೆಗೆ ತಕ್ಕಂತೆ ಮರಳು ಪೂರೈಕೆ ಆಗುವಂತೆ ನೋಡಿಕೊಂಡು, ಕಟ್ಟಡ ಕಾರ್ಮಿಕರಾದ ನಮಗೆ ಉದ್ಯೋಗ ಒದಗಿಸಿಕೊಡಬೇಕು ಎಂದು ತಾಲೂಕು ಗಾರೆ ಕಾರ್ಮಿಕರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಲೋಡರ್ಸ್ ಕೂಲಿಕಾರರ ಸಂಘ ಹಾಗೂ ಟ್ರಾಕ್ಟರ್ ಮತ್ತು ಎತ್ತಿನ ಗಾಡಿ ಮಾಲೀಕರ ಸಂಘದ ಸದಸ್ಯರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ನಂತರ ತಾಲೂಕು ಕಚೇರಿಯ ಆವರಣದಲ್ಲಿ ಸಭೆ ನಡೆಸಿದ ಕೂಲಿ ಕಾರ್ಮಿಕರು ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ, ಆಶ್ರಯ ಮನೆ ನಿರ್ಮಿಸುವ ಬಡವರಿಗೆ ಕಡಿಮೆ ದರದಲ್ಲಿ ಮರಳನ್ನು ಪೂರೈಕೆ ಮಾಡಿ ಜೀವನ ನಿರ್ವಹಣೆ ಮಾಡುತ್ತಿರುವ ಕೂಲಿ ಕಾರ್ಮಿಕರ ವಿರೋಧಿಯಾಗಿರುವ ನೂತನ ಮರಳು ನೀತಿಯನ್ನು ಕೂಡಲೇ ವಾಪಸ್ ಪಡೆಯಬೇಕು. ಸರ್ಕಾರವು ವಿದೇಶದಿಂದ ಮರಳು ತಂದು ಗ್ರಾಹಕರಿಗೆ ನೀಡುವುದಾಗಿ ಹೇಳುತ್ತಿದೆ. ಇದರಿಂದ ಗ್ರಾಮೀಣ ಭಾಗದ ಬಡವರು ಬೆಂಗಳೂರಿಗೆ ಬಂದು ಮರಳನ್ನು ತರಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕಲ್ಲು ಗಣಿಗಾರಿಕೆಯ ಮೂಲಕ ಶ್ರೀಮಂತರಿಂದ ಸಂಗ್ರಹವಾಗುವ ಎಂಸ್ಯಾಂಡ್ ಅನ್ನು ಬಳಕೆ ಮಾಡುವಂತೆ ಸರ್ಕಾರ ಹೇಳುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಎಂ.ಸ್ಯಾಂಡ್ ಬಳಕೆಗೆ ನಿರಾಸಕ್ತಿ ಇರುವ ಕಾರಣ ಕಟ್ಟಡ ಕೂಲಿ ಕಾರ್ಮಿಕರು ಹಾಗೂ ಗಾರೆ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ನರಳುವಂತಾಗಿದೆ. ಸರ್ಕಾರವು ಸ್ಥಳೀಯವಾಗಿ ದೊರೆಯುವ ಮರಳನ್ನು ತೆಗೆದು ಸ್ಥಳೀಯವಾಗಿ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು. ಮರಳನ್ನು ತಾಲೂಕಿನಿಂದ ಹೊರಗಡೆ ಸಾಗಿಸುವುದನ್ನು ನಿಷೇಧಿಸಿದರೆ ಕೂಲಿ ಕಾರ್ಮಿಕರು ಮುಕ್ತವಾಗಿ ಸ್ವಾಗತಿಸುತ್ತೇವೆ. ಆದರೆ ತಾಲೂಕಿನಲ್ಲಿ ದೊರೆಯುವ ಮರಳನ್ನು ಇಲ್ಲಿಯೇ ಬಳಸಲು ಇರುವ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕುವ ಮೂಲಕ ಕೆಲಸವಿಲ್ಲದೇ ತೊಂದರೆಗೆ ಸಿಲುಕಿರುವ ಕಾರ್ಮಿಕರಿಗೆ ಅನುಕೂಲ ಮಾಡಿ ಕೊಡಬೇಕು ಒತ್ತಾಯಿಸಿದರು.

ಸಭೆಯಲ್ಲಿ ಕಟ್ಟಡ ಕಾರ್ಮಿಕರು ಮತ್ತು ಗಾರೆ ಕಾರ್ಮಿಕರ ಸಂಘದ ಉಪಾಧ್ಯಕ್ಷರಾದ ಚಂದ್ರಕುಮಾರ್, ಕಾರ್ಯದರ್ಶಿ ಸೋಮು, ಸ್ವಾಮಿ, ವೆಂಕಟೇಶ್, ದೇವರಾಜು, ನರೇಂದ್ರ, ಸತೀಶ್, ರವಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: